ಧ್ರುವತಾಳ
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದ ತೀರ್ಥಕರಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ
ವಾದ ಮಾಯಾವಾದಿಗಳ ಗೆದ್ದೆ
ವಾದಿರಾಜರ ಮಹಿಮೆ ವರ್ಣಿಸಲರ್ಹನಲ್ಲಾ
ಮಾಧವ ವೇದವೇದ್ಯ ವಿಜಯವಿಠ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ
ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ||1||
ಮಟ್ಟತಾಳ
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡದ ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡೆಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿ ನಿಂದ
ಉಡುರಾಜಮುಖ ನಮ್ಮ ವಿಜಯ ವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||2||
ತ್ರಿವಿಡಿತಾಳ
ತಾಮಸಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮನುಡಿಯೆ ಪರಂ
ಧಾಮ ದೊರಿಯದು ಭೂಮಿಯೊಳಗಿದ್ದ
ಭ್ರಾಮಕ ಜನರಿಗೆ ವಾಮದೇವನೆ
ಹಿರಿಯನೆಂದು ಬುದ್ಧಿಯಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯ ವಿಠ್ಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ||3||
ಅಟ್ಟತಾಳ
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ
ಗ್ವಿಜಯ ಮಾಡಲು ಪುರಕೆ
ನಿಜಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜಪದಕೆ ಬಂದು ಅಖಿಳರನಾಳಿದಾ
ನಿಜವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠಲನ್ನ
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ
ಜ್ಞಾನ ಪಕ್ವಾದ ಮಾನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ
ಅಜಪದ ಸಲ್ವದು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿ||4||
ಆದಿತಾಳ
ಮನಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ
ವನಜ ಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು
ಮುನಿವಾದಿರಾಜರು ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನತನೂಧ್ಬವ ಕೋಪದಿಂದೀ ಕಾರಣ ಮಹಿಮೆ
ಯನು ಕೊಂಡಾಡಿ ಅನುದಿನ ಸುಜನರು ||5||
ಜತೆ
ಮೋದ ತೀರ್ಥ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲದಾಸಾ||6||
Dhruvatala
Madhavanangri nitya modadalli Bajipa
Sadhu sanmunivarya sammoda tirthakarapada
Sadaradinda Bajisi medinige bara
Vada mayavadigala gedde
Vadirajara mahime varnisalarhanalla
Madhava vedavedya vijayaviththala tanu
Adaradindavara Bujadi hayavaktranagi
Padavannu ittu svaduvada
Kadali huranavanu unda
Sridharana mahime sadhujanaru keli ||1||
Mattatala
Kadalalli pavadisida odiya ta podaviyali
Mrudanuta govinda jadada harivanadalli
Kadali sakkare berisi laddugeya madida
Sadagarada baksha payasa gruta nide
Odeyanu brahmadi parivara sahitundu
Kadagolu nenu pididudupili ninda
Udurajamuka namma vijaya viththalanu
Bedagu karyavannu nadesida bage keli ||2||
Trividitala
Tamasagunavulla pamara janarige
I mahime dorakuvude svami silakuvane
Kamisi koti varusha namanudiye param
Dhama doriyadu bumiyolagidda
Bramaka janarige vamadevane
Hiriyanemdu buddhiyakoduva
Kamari vandya namma vijaya viththalanu
Samanya janarige dorakuvane keli ||3||
Attatala
Aja satyalokadhipatyavannu madi di
Gvijaya madalu purake
Nijasuj~jana purnapraj~jarembo muniyu
Ajapadake bandu akilaranalida
Nijavayu hanuma bima madhvanenisida
Vijayasarathi padarajada mahatmeyimda
Gajavairi Banjana vijayavithalanna
Bajaniya gaiyuta bahukaladi
Rujugana panktiyolage kulita
Nija nirmala suj~jana dhyanadinda
J~jana pakvada manavulla
Sujana siromani vadirajanu ta
Nijavagi bommanda purana sadhakadinda
Ajapada salvadu lesa samsayabedi
Nija nija nijavendu nityadi kondadi||4||
Aditala
Manasuddharagi madhavanangriyanu
Dina dinadalli nambi kondippare
Anavaratananda guru madhvarayara divya
Vanaja padamgala smarisalu
Hanumesa namma siri vijayaviththala tanu
Munivadirajaru samanyarentendu
Enisidavarannu ganavagi sikshipa
Inatanudhbava kopadindi karana mahime
Yanu kondadi anudina sujanaru ||5||
Jate
Moda tirtha mata senadhipatiyada
Vadiraja muniyu vijayaviththaladasa||6||
3 thoughts on “Vadiraja Suladhi by Vijaya dasa”