ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀನಿವಾಸನ ಚರಿತೆಗಳ ಪರಮಾನುರಾಗದಿ ಬೆಸೆಗೊಳಲು
ಮುನಿ ಶೌನಕಾದ್ಯರಿಗೆ ಅರುಪಿದನು ಸೂತಾರ್ಯ ದಯದಿಂದ||
ಪಚನ ಭಕ್ಷಣ ಗಮನ ಭೋಜನ ವಚನ ಮೈಥುನ ಶಯನ ವೀಕ್ಷಣ
ಅಚಲನಾ ಚಲನ ಪ್ರಯತ್ನದಿ ಸಾಧ್ಯವೇ ಜನಕೆ
ಶುಚಿ ಸದನ ದಯದಿಂದ ಜೀವರ ನಿಚಯದೊಳು ತಾ ನಿಂತು ಮಾಡುವ
ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು||1||
ವಿಷ್ಟರ ಶ್ರವ ದೇಹದೊಳಗೆ ಪ್ರವಿಷ್ಟನಾಗಿ ನಿರಂತರದಿ
ಬಹು ಚೇಷ್ಟೆಗಳ ಮಾಡುತಿರೆ ಕಂಡು ಸಜೀವಿಯೆನುತಿಹರು
ಹೃಷ್ಟರಾಗುವರು ನೋಡಿ ಕನಿಷ್ಟರು ಎಲ್ಲರು ಸೇವೆ ಮಾಳ್ಪರು
ಬಿಟ್ಟ ಕ್ಷಣದಲಿ ಕುಣಪ ಸಮವೆಂದರಿದು ಅನುಪೇಕ್ಷಿಪರು||2||
ಕ್ರೀಡೆಗೋಸುಗ ಅವರವರ ಗತಿ ನೀಡಲೋಸುಗ ದೇಹಗಳ ಕೊಟ್ಟು ಆಡುವನು ಸ್ವೇಚ್ಚೆಯಲಿ
ಬ್ರಹ್ಮ ಈಶಾದ್ಯರೊಳು ಪೊಕ್ಕು
ಮಾಡುವನು ವ್ಯಾಪಾರ ಬಹು ವಿಧ ಮೂಢ ದೈತ್ಯರೊಳಿದ್ದು ಪ್ರತಿದಿನ
ಕೇಡು ಲಾಭಗಳಿಲ್ಲವು ಇದರಿಂದ ಆವ ಕಾಲದಲಿ||3||
ಅಕ್ಷರ ಈಡ್ಯನು ಬ್ರಹ್ಮ ವಾಯು ತ್ರ್ಯಕ್ಷ ಸುರಪಾಸುರ ಅಸುರರೊಳು
ಅಧ್ಯಕ್ಷನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ
ಅಕ್ಷಯನು ಸತ್ಯಾತ್ಮಕ ಪರಾಪೇಕ್ಷೆಯಿಲ್ಲದೆ
ಸರ್ವರೊಳಗೆ ವಿಲಕ್ಷಣನು ತಾನಾಗಿ ಲೋಕವ ರಕ್ಷಿಸುತಲಿಪ್ಪ||4||
ಶ್ರೀ ಸರಸ್ವತಿ ಭಾರತೀ ಗಿರಿಜಾ ಶಚೀ ರತಿ ರೋಹಿಣೀ ಸಂಜ್ಞಾ ಶತ ಸುರೂಪಾದಿ
ಅಖಿಳ ಸ್ತ್ರೀಯರೊಳು ಸ್ತ್ರೀ ರೂಪ ವಾಸವಾಗಿದ್ದೆಲ್ಲರಿಗೆ
ವಿಶ್ವಾಸ ತನ್ನಲಿ ಕೊಡುವ
ಅವರಭಿಲಾಷೆಗಳ ಪೂರೈಸುತಿಪ್ಪನು ಯೋಗ್ಯತೆಗಳರಿತು||5||
ಕೋಲು ಕುದುರೆಯ ಮಾಡಿ ಆಡುವ ಬಾಲಕರ ತೆರದಂತೆ
ಲಕ್ಷ್ಮೀ ಲೋಲ ಸ್ವಾತಂತ್ರ್ಯ ಗುಣವ ಬ್ರಹ್ಮಾದ್ಯರೊಳಗಿಟ್ಟು
ಲೀಲೆಗೈವನು ತನ್ನವರಿಗೆ ಅನುಕೂಲನಾಗಿದ್ದು ಎಲ್ಲ ಕಾಲದಿ
ಖುಲ್ಲರಿಗೆ ಪ್ರತಿಕೂಲನಾಗಿಹ ಪ್ರಕಟನಾಗದಲೆ||6||
ಸೌಪರ್ಣಿ ವರವಹನ ನಾನಾ ರೂಪ ನಾಮದಿ ಕರೆಸುತ ಅವರ ಸಮೀಪದಲ್ಲಿದ್ದು
ಅಖಿಳ ವ್ಯಾಪಾರಗಳ ಮಾಡುವನು
ಪಾಪ ಪುಣ್ಯಗಳೆರೆಡು ಅವರ ಸ್ವರೂಪಗಳ ಅನುಸರಿಸಿ ಉಣಿಪ
ಪರೋಪಕಾರಿ ಪರೇಶ ಪೂರ್ಣಾನಂದ ಜ್ಞಾನ ಘನ||7||
ಆಹಾರ ನಿದ್ರಾ ಮೈಥುನಗಳ ಅಹರಾಹರ ಬಯಸಿ ಬಳಲುವ
ಲಕ್ಷ್ಮೀ ಮಹಿತನ ಮಹಾ ಮಹಿಮೆಗಳನು ಎಂತರಿವ ನಿತ್ಯದಲಿ
ಅಹಿಕ ಸೌಖ್ಯವ ಮರೆದು ಮನದಲಿ ಗ್ರಹಿಸಿ ಶಾಸ್ತ್ರಾರ್ಥಗಳ
ಪರಮೋತ್ಸಾಹದಿ ಕೊಂಡಾಡುತಲೆ ಮೈಮರೆದವರಿಗಲ್ಲದಲೆ||8||
ಬಂಧಮೋಕ್ಷ ಪ್ರದನ ಜ್ಞಾನವು ಮಂದಮತಿಗಳಿಗೆಂತು ದೊರೆವುದು
ಬಿಂದು ಮಾತ್ರ ಸುಖಾನುಭವ ಪರ್ವತಕೆ ಸಮ ದುಃಖವೆಂದು ತಿಳಿಯದೆ
ಅನ್ಯ ದೈವಗಳಿಂದ ಸುಖವ ಅಪೇಕ್ಷಿಸುವರು
ಮುಕುಂದನ ಆರಾಧನೆಯ ಬಿಟ್ಟವಗೆ ಉಂಟೆ ಮುಕ್ತಿ ಸುಖ||9||
ರಾಜ ತನ್ನ ಅಮಾತ್ಯ ಕರುಣದಿ ನೈಜ ಜನರಿಗೆ ಕೊಟ್ಟು ಕಾರ್ಯ ನಿಯೋಜಿಸುತ
ಮಾನಾಪಮಾನವ ಮಾಳ್ಪ ತೆರದಂತೆ
ಶ್ರೀ ಜನಾರ್ಧನ ಸರ್ವರೊಳಗೆ ಅಪರಾಜಿತನು ತಾನಾಗಿ
ಸರ್ವ ಪ್ರಯೋಜನವ ಮಾಡಿಸುತ ಮಾಡುವ ಫಲಕೆ ಗುರಿಮಾಡಿ||10||
ವಾಸುದೇವ ಸ್ವತಂತ್ರವ ಸರೊಜಾಸನಾದಿ ಅಮರಾಸುರರಿಗೆ ಈಯಲೋಸುಗ ಅರ್ಧವ ತೆಗೆದು
ಅದರೊಳರ್ಧವ ಚತುರ್ಭಾಗಗೈಸಿ
ವಂದನು ಶತವಿಧ ದ್ವಿ ಪಂಚಾಶತಾಬ್ಜಜಗೆ
ಅಷ್ಟ ಚತ್ವಾರಿಂಶದ್ ಅನಿಲಗಿತ್ತ ವಾಣೀ ಭಾರತೀಗರ್ಧ||11||
ದ್ವಿತೀಯ ಪಾದವ ತೆಗೆದುಕೊಂಡು ಅದ ಶತ ವಿಭಾಗವ ಮಾಡಿ
ತಾ ವಿಂಶತಿ ಉಮೇಶನೊಳಿಟ್ಟ ಇಂದ್ರನೊಳು ಐದಧಿಕ ಹತ್ತು
ರತಿಪನೊಳಗೆ ಇನಿತಿಟ್ಟ ಅಖಿಳ ದೇವತೆಗಳೊಳಗೆ ಈರೈದು
ಜೀವ ಪ್ರತತಿಯೊಳು ದಶ ಐದಧಿಕ ನಾಲ್ವತ್ತು ದೈತ್ಯರೊಳು||12||
ಕಾರುಣಿಕ ಸ್ವಾತಂತ್ರ್ಯತ್ವವ ಮೂರು ವಿಧಗೈಸಿ ಎರಡು ತನ್ನೊಳು
ನಾರಿಗೊಂದನು ಕೊಟ್ಟ ಸ್ವಾತಂತ್ರ್ಯವ ಸರ್ವರಿಗೆ ಧಾರುಣಿಪ ತನ್ನ ಅನುಗರಿಗೆ
ವ್ಯಾಪಾರ ಕೊಟ್ಟು ಗುಣಾಗುಣಗಳ ವಿಚಾರ ಮಾಡುವ ತೆರದಿ
ತ್ರಿಗುಣ ವ್ಯಕ್ತಿಯನೆ ಮಾಳ್ಪ||13||
ಪುಣ್ಯ ಕರ್ಮಕೆ ಸಹಾಯವಾಗುವ ಧನ್ಯರಿಗೆ ಕಲ್ಯಾದಿ ದೈತ್ಯರ
ಪುಣ್ಯ ಫಲಗಳನೀವ ದಿವಿಜರ ಪಾಪ ಕರ್ಮ ಫಲಾನ್ಯ ಕರ್ಮವ ಮಾಳ್ಪರಿಗೆ
ಅನುಗುಣ್ಯ ಜನರಿಗೆ ಕೊಡುವ
ಬಹು ಕಾರುಣ್ಯ ಸಾಗರನು ಈ ತೆರದಿ ಭಕ್ತರನು ಸಂತೈಪ||14||
ನಿರುಪಮಗೆ ಸರಿಯುಂಟೆಂದು ಉಚ್ಚರಿಸುವವ ತದ್ಭಕ್ತರೊಳು ಮತ್ಸರಿಸುವವ
ಗುಣಗುಣಿಗಳಿಗೆ ಭೇದಗಳ ಪೇಳುವವ
ದರ ಸುದರ್ಶನ ಊರ್ಧ್ವ ಪುಂಡ್ರವ ಧರಿಸುವರೊಳು ದ್ವೇಷಿಸುವ
ಹರಿ ಚರಿತೆಗಳ ಕೇಳದಲೆ ಲೋಗರ ವಾರ್ತೆ ಕೇಳುವವ||15||
ಏವಮಾದೀ ದ್ವೇಷವುಳ್ಳ ಕುಜೀವರೆಲ್ಲರು ದೈತ್ಯರೆಂಬರು
ಕೋವಿದರ ವಿಜ್ಞಾನ ಕರ್ಮವ ನೋಡಿ ನಿಂದಿಪರು
ದೇವ ದೇವನ ಬಿಟ್ಟು ಯಾವತ್ಜೀವ ಪರ್ಯಂತರದಿ ತುಚ್ಚರ ಸೇವೆಯಿಂದ
ಉಪಜೀವಿಸುವರು ಅಜ್ಞಾನಕೆ ಒಳಗಾಗಿ||16||
ಕಾಮ ಲೋಭ ಕ್ರೋಧ ಮದ ಹಿಂಸಾಮಯ ಅನೃತ ಕಪಟ
ತ್ರಿಧಾಮನ ಅವತಾರಗಳ ಭೇದಾಪೂರ್ಣ ಸುಖಬದ್ಧ
ಆಮಿಷ ಅನಿವೇದಿತ ಅಭೋಜ್ಯದಿ ತಾಮಸ ಅನ್ನವನು ಉಂಬ ತಾಮಸ
ಶ್ರೀ ಮದಾಂಧರ ಸಂಗದಿಂದಲಿ ತಮವೆ ವರ್ಧಿಪುದು||17||
ಜ್ಞಾನ ಭಕ್ತಿ ವಿರಕ್ತಿ ವಿನಯ ಪುರಾಣ ಶ್ರವಣ ಶಾಸ್ತ್ರ ಚಿಂತನ
ದಾನ ಶಮ ದಮ ಯಜ್ಞ ಸತ್ಯ ಅಹಿಂಸ ಭೂತದಯ
ಧ್ಯಾನ ಭಗವನ್ನಾಮ ಕೀರ್ತನ ಮೌನ ಜಪ ತಪ ವ್ರತ
ಸುತೀರ್ಥ ಸ್ನಾನ ಮಂತ್ರ ಸ್ತೋತ್ರ ವಂದನ ಸಜ್ಜನರ ಗುಣವು||18||
ಲೇಶ ಸ್ವಾತಂತ್ರ್ಯ ಗುಣವನು ಪ್ರವೇಶಗೈಸಿದ ಕಾರಣದಿ
ಗುಣ ದೋಷಗಳು ತೋರುವವು ಸತ್ಯಾಸತ್ಯ ಜೀವರೊಳು
ಶ್ವಾಸ ಭೋಜನ ಪಾನ ಶಯನ ವಿಲಾಸ ಮೈಥುನ ಗಮನ ಹರುಷ
ಕ್ಲೇಷ ಸ್ವಪ್ನ ಸುಷುಪ್ತಿ ಜಾಗ್ರತಿಯು ಅಹವು ಚೇತನಕೆ||19||
ಅರ್ಧ ತನ್ನೊಳಗಿರಿಸಿ ಉಳಿದೊಂದರ್ಧವ ವಿಭಾಗಗೈಸಿ
ವೃಜಿನ ಅರ್ದನನು ಪೂರ್ವದಲಿ ಸ್ವಾತಂತ್ರ್ಯವ ಕೊಟ್ಟಂತೆ
ಸ್ವರ್ಧುನೀಪಿತ ಕೊಡುವ ಅವರ ಸುಖ ವೃದ್ಧಿ ಗೋಸುಗ
ಬ್ರಹ್ಮ ವಾಯು ಕಪರ್ದಿ ಮೊದಲಾದ ಅವರೊಳಿದ್ದು ಅವರ ಯೋಗ್ಯತೆಯನರಿತು||20||
ಹಲಧರಾನುಜ ಮಾಳ್ಪ ಕೃತ್ಯವ ತಿಳಿಯದೆ ಅಹಂಕಾರದಿಂದ
ಎನ್ನುಳಿದು ವಿಧಿ ನಿಷೇಧ ಪಾತ್ರರಿಲ್ಲವೆಂಬುವಗೆ
ಫಲಗಳ ದ್ವಯಕೊಡುವ ದೈತ್ಯರ ಕಲುಷ ಕರ್ಮವ ಬಿಟ್ಟು ಪುಣ್ಯವ ಸೆಳೆದು
ತನೂಳಗಿಟ್ಟು ಕ್ರಮದಿಂ ಕೊಡುವ ಭಕ್ತರಿಗೆ||21||
ತೋಯಜಾಪ್ತನ ಕಿರಣ ವೃಕ್ಷ ಛಾಯ ವ್ಯಕ್ತಿಸುವಂತೆ
ಕಮಲದಳಾಯತಾಕ್ಷನು ಸರ್ವರೊಳು ವ್ಯಾಪಿಸಿದ ಕಾರಣದಿ
ಹೇಯ ಸದ್ಗುಣ ಕರ್ಮ ತೋರ್ಪವು ನ್ಯಾಯ ಕೋವಿದರಿಗೆ
ನಿರಂತರ ಶ್ರೀಯರಸ ಸರ್ವೋತ್ತಮೋತ್ತಮನು ಎಂದು ಪೇಳುವರು||22||
ಮೂಲ ಕಾರಣ ಪ್ರಕೃತಿಯೆನಿಪ ಮಹಾಲಕುಮಿ ಎಲ್ಲರೊಳಗಿದ್ದು ಸುಲೀಲೆಗೈವುತ
ಪುಣ್ಯ ಪಾಪಗಳರ್ಪಿಸಲು ಪತಿಗೆ
ಪಾಲಗಡಲೊಳು ಬಿದ್ದ ಜಲ ಕೀಲಾಲವು ಎನಿಪುದೆ
ಜೀವಕೃತ ಕರ್ಮಾಳಿ ತದ್ವತು ಶುಭವೆನಿಪವು ಎಲ್ಲ ಕಾಲದಲಿ||23||
ಜ್ಞಾನ ಸುಖ ಬಲ ಪೂರ್ಣ ವಿಷ್ಣುವಿಗೆ ಏನು ಮಾಳ್ಪವು ತ್ರಿಗುಣ ಕಾರ್ಯ
ಕೃಶಾನುವಿನ ಕೃಮಿಕವಿದು ಭಕ್ಷಿಪದುಂಟೆ ಲೋಕದೊಳು
ಈ ನಳಿನಜಾಂಡವನು ಬ್ರಹ್ಮ ಈಶಾನ ಮುಖ್ಯ ಸುರಾಸುರರ
ಕಾಲಾನಳನವೊಳ್ ನುಂಗುವಗೆ ಈ ಪಾಪಗಳ ಭಯವೆ||24||
ಮೋದ ಶಿರ ದಕ್ಷಿಣ ಸುಪಕ್ಷ ಪ್ರಮೋದ ಉತ್ತರ ಪಕ್ಷವೆಂದು
ಋಗಾದಿ ಶ್ರುತಿಗಳು ಪೇಳುವವು ಆನಂದಮಯ ಹರಿಗೆ
ಮೋದ ವೈಷಿಕ ಸುಖ ವಿಶಿಷ್ಟ ಪ್ರಮೋದ ಪಾರತ್ರಿಕ ಸುಖಪ್ರದನು
ಆದ ಕಾರಣದಿಂದ ಮೋದ ಪ್ರಮೋದನು ಎನಿಸಿದನು||25||
ಎಂದಿಗಾದರು ವೃಷ್ಟಿಯಿಂದ ವಸುಂಧರೆಯೊಳಗಿಪ್ಪ
ಅಖಿಳ ಜಲದಿಂ ಸಿಂಧು ವೃದ್ಧಿಯನು ಐದುವದೆ ಬಾರದಿರೆ ಬರಿದಹುದೆ
ಕುಂದು ಕೊರತೆಗಳಿಲ್ಲದಿಹ ಸ್ವಾನಂದ ಸಂಪೂರ್ಣ ಸ್ವಭಾವಗೆ
ಬಂದು ಮಾಡುವದೇನು ಕರ್ಮಾಕರ್ಮ ಜನ್ಯ ಫಲ||26||
ದೇಹ ವೃಕ್ಷದೊಳು ಎರಡು ಪಕ್ಷಿಗಳಿಹವು ಎಂದಿಗು ಬಿಡದೆ ಪರಮ ಸ್ನೇಹದಿಂದಲಿ
ಕರ್ಮಜ ಫಲಗಳುಂಬ ಜೀವ ಖಗ
ಶ್ರೀ ಹರಿಯು ತಾ ಸಾರಭೋಕ್ತನು ದ್ರೋಹಿಸುವ ಕಲ್ಯಾದಿ ದೈತ್ಯ ಸಮೂಹಕೆ
ಈವ ವಿಶಿಷ್ಟ ಪಾಪವ ಲೇಶವೆಲ್ಲರಿಗೆ||27||
ದ್ಯುಮಣಿ ಕಿರಣವ ಕಂಡ ಮಾತ್ರದಿ ತಿಮಿರವು ಓಡುವ ತೆರದಿ
ಲಕ್ಷ್ಮೀ ರಮಣ ನೋಡಿದ ಮಾತ್ರದಿಂದ ಅಘ ನಾಶವು ಐದುವದು
ಕಮಲ ಸಂಭವ ಮುಖ್ಯ ಎಲ್ಲಾ ಸುಮನಸರೊಳು ಇಹ ಪಾಪ ರಾಶಿಯ
ಅಮರಮುಖನಂದದಲಿ ಭಸ್ಮವ ಮಾಳ್ಪ ಹರಿ ತಾನು||28||
ಚತುರ ಶತ ಭಾಗದಿ ದಶಾಂಶದೊಳು ಇತರ ಜೀವರಿಗೀವ
ಲೇಶವ ದಿತಿಜ ದೇವಕ್ಕಳಿಗೆ ಕೊಡುವ ವಿಶಿಷ್ಟ ದುಃಖ ಸುಖ
ಮತಿವಿಹೀನ ಪ್ರಾಣಿಗಳಿಗೆ ಆಹುತಿಯ ಸುಖ ಮೃತಿ ದುಃಖ
ಅವರ ಯೋಗ್ಯತೆಯನರಿತು ಪಿಪೀಲಮಶಕಾದಿಗಳಿಗೀವ ಹರಿ||29||
ನಿತ್ಯ ನನಿರಯಾಂಧಾಖ್ಯ ಕೂಪದಿ ಭೃತ್ಯರಿಂದೊಡಗೂಡಿ
ಪುನರಾವೃತ್ತಿ ವರ್ಜಿತ ಲೋಕವೈದುವ ಕಲಿಯು ದ್ವೇಷದಲಿ
ಸತ್ಯ ಲೋಕಾಧಿಪ ಚತುರ್ಮುಖ ತತ್ವ ದೇವಕ್ಕಳ ಸಹಿತ
ನಿಜಮುಕ್ತಿಯ ಐದುವ ಹರಿ ಪದಾಬ್ಜವ ಭಜಿಸಿ ಭಕುತಿಯಲಿ||30||
ವಿಧಿ ನಿಷೇಧಗಳು ಎರಡು ಮರೆಯದೆ ಮಧು ವಿರೋಧಿಯ ಪಾದಕರ್ಪಿಸು
ಅದಿತಿ ಮಕ್ಕಳಿಗೀವ ಪುಣ್ಯವ ಪಾಪ ದೈತ್ಯರಿಗೆ
ಸುದರ್ಶನ ಧರೆಗೆ ಈಯದಿರೆ ಬಂದೊದಗಿ ಒಯ್ವರು ಪುಣ್ಯ ದೈತ್ಯರು
ಅಧಿಪರಿಲ್ಲದ ವೃಕ್ಷಗಳ ಫಲದಂತೆ ನಿತ್ಯದಲಿ||31||
ತಿಲಜ ಕಲ್ಮಶ ತ್ಯಜಿಸಿ ದೀಪವು ತಿಳಿಯ ತೈಲವ ಗ್ರಹಿಸಿ
ಮಂದಿರದೊಳಗೆ ವ್ಯಾಪಿಸಿಪ್ಪ ಕತ್ತಲೆ ಭಂಗಿಸುವ ತೆರದಿ
ಕಲಿ ಮೊದಲುಗೊಂಡ ಅಖಿಳ ದಾನವ ಕುಲಜರು ಅನುದಿನ ಮಾಳ್ಪ ಪುಣ್ಯಜ ಫಲವ
ಬ್ರಹ್ಮಾದ್ಯರಿಗೆ ಕೊಟ್ಟು ಅಲ್ಲಲ್ಲೇ ರಮಿಸುವನು||32||
ಇದ್ದಲೆಯು ನಿತ್ಯದಲಿ ಮೇಧ್ಯಾಮೇಧ್ಯ ವಸ್ತುಗಳುಂಡು
ಲೋಕದಿ ಶುದ್ಧ ಶುಚಿಯೆಂದೆನಿಸಿ ಕೊಂಬನು ವೇದ ಸ್ಮೃತಿಗಳೊಳು
ಬುದ್ಧಿಪೂರ್ವಕವಾಗಿ ವಿಬುಧರು ಶ್ರದ್ಧೆಯಿಂದ ಅರ್ಪಿಸಿದ ಕರ್ಮ
ನಿಷಿದ್ಧವಾದರು ಸರಿಯೇ ಕೈಕೊಂಡು ಉದ್ಧರಿಸುತಿಪ್ಪ||33||
ಒಡೆಯರಿದ್ದ ವನಸ್ಥ ಫಲಗಳ ಬಡಿದು ತಿಂಬುವರುಂಟೆ
ಕಂಡರೆ ಹೊಡೆದು ಬಿಸುಟುವರೆಂಬ ಭಯದಿಂ ನೋಡಲಂಜುವರು
ಬಿಡದೆ ಮಾಡುವ ಕರ್ಮಗಳ ಮನೆ ಮಡದಿ ಮಕ್ಕಳು ಬಂಧುಗಳು
ಕಾರೊಡಲನ ಆಳ್ಗಳೆಂದ ಮಾತ್ರದಲಿ ಓಡುವವು ದುರಿತ||34||
ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳ
ಲಕ್ಷ್ಮೀ ನಿವಾಸನಿಗೆ ಅರ್ಪಿಸುತಲಿರು ಕಾಲಕಾಲದಲಿ
ಪ್ರಾಣ ಪತಿ ಕೈಕೊಂಡು ನಾನಾ ಯೋನಿಯೈದಿಸನು
ಒಮ್ಮೆ ಕೊಡದಿರೆ ದಾನವರು ಸೆಳೆದೊಯ್ವರು ಎಲ್ಲಾ ಪುಣ್ಯ ರಾಶಿಗಳ||35||
ಶ್ರುತಿ ಸ್ಮೃತಿ ಅರ್ಥವ ತಿಳಿದು ಅಹಂಮತಿ ವಿಶಿಷ್ಟನು ಕರ್ಮ ಮಾಡಲು
ಪ್ರತಿಗ್ರಹಿಸನು ಪಾಪಗಳನು ಕೊಡುತಿಪ್ಪ ನಿತ್ಯ ಹರಿ
ಚತುರ ದಶ ಭುವನ ಅಧಿಪತಿ ಕೃತ ಕೃತ ಕೃತಜ್ಞ ನಿಯಾಮಕನುಯೆನೆ
ಮತಿಭ್ರಂಶ ಪ್ರಮಾದ ಸಂಕಟ ದೋಷವಾಗಿಲ್ಲ||36||
ವಾರಿಜಾಸನ ಮುಖ್ಯರು ಆಜ್ಞಾಧಾರಕರು ಸರ್ವ ಸ್ವತಂತ್ರ ರಮಾರಮಣನು
ಎಂದರಿದು ಇಷ್ಟಾನಿಷ್ಟ ಕರ್ಮಫಲ
ಸಾರಭೋಕ್ತನಿಗೆ ಅರ್ಪಿಸಲು ಸ್ವೀಕಾರ ಮಾಡುವ
ಪಾಪಫಲವ ಕುಬೇರ ನಾಮಕ ದೈತ್ಯರಿಗೆ ಕೊಟ್ಟು ಅವರ ನೋಯಿಸುವ||37||
ಕ್ರೂರ ದೈತ್ಯರೊಳಿದ್ದು ತಾನೇ ಪ್ರೇರಿಸುವ ಕಾರಣದಿ ಹರಿಗೆ ಕುಬೇರನೆಂಬರು
ಎಲ್ಲರೊಳು ನಿರ್ಗತ ರತಿಗೆ ನಿರತಿ
ಸೂರಿ ಗಮ್ಯಗೆ ಸೂರ್ಯನೆಂಬರು ದೂರ ಶೋಕಗೆ ಶುಕ್ಲ ಲಿಂಗ ಶರೀರ
ಇಲ್ಲದ ಕಾರಣದಿ ಅಕಾಯನೆನಿಸುವನು||38||
ಪೇಳಲು ವಶವಲ್ಲದ ಮಹಾ ಪಾಪಾಳಿಗಳನು ಒಂದೇ ಕ್ಷಣದಿ ನಿರ್ಮೂಲಗೈಸಲು ಬೇಕು
ಎಂಬುವಗೆ ಒಂದೇ ಹರಿನಾಮ
ನಾಲಿಗೆಯೊಳುಳ್ಳವಗೆ ಪರಮ ಕೃಪಾಳು ಕೃಷ್ಣನು ಕೈವಿಡಿದು
ತನ್ನ ಆಲಯದೊಳಿಟ್ಟು ಅನುದಿನದಿ ಆನಂದ ಪಡಿಸುವನು||39||
ರೋಗಿ ಔಷಧ ಪಥ್ಯದಿಂದ ನಿರೋಗಿಯೆನಿಸುವ ತೆರದಿ
ಶ್ರೀಮದ್ಭಾಗವತ ಸುಶ್ರವಣಗೈದು ಭವಾಖ್ಯ ರೋಗವನು ನೀಗಿ
ಶಬ್ಧಾದಿ ಅಖಿಳ ವಿಷಯ ನಿಯೋಗಿಸು ದಶ ಇಂದ್ರಿಯ ಅನಿಲನೊಳು
ಶ್ರೀ ಗುರು ಜಗನ್ನಾಥ ವಿಠಲ ಪ್ರೀತನಾಗುವನು||40||
harikathAmRutasAra gurugaLa karuNadindApanitu kELuve/
parama BagavadBaktaru idanAdaradi kELuvudu||
SrInivAsana caritegaLa paramAnurAgadi besegoLalu
muni SaunakAdyarige arupidanu sUtArya dayadinda||
pacana BakShaNa gamana BOjana vacana maithuna Sayana vIkShaNa
acalanA calana prayatnadi sAdhyavE janake
Suci sadana dayadinda jIvara nicayadoLu tA nintu mADuva
ucitAnucita karmagaLanendaridu konDADu||1||
viShTara Srava dEhadoLage praviShTanAgi nirantaradi
bahu cEShTegaLa mADutire kanDu sajIviyenutiharu
hRuShTarAguvaru nODi kaniShTaru ellaru sEve mALparu
biTTa kShaNadali kuNapa samavendaridu anupEkShiparu||2||
krIDegOsuga avaravara gati nIDalOsuga dEhagaLa koTTu ADuvanu svEcceyali
brahma ISAdyaroLu pokku
mADuvanu vyApAra bahu vidha mUDha daityaroLiddu pratidina
kEDu lABagaLillavu idarinda Ava kAladali||3||
akShara IDyanu brahma vAyu tryakSha surapAsura asuraroLu
adhyakShanAgiddu ellaroLu vyApAra mADutiha
akShayanu satyAtmaka parApEkSheyillade
sarvaroLage vilakShaNanu tAnAgi lOkava rakShisutalippa||4||
SrI sarasvati BAratI girijA SacI rati rOhiNI sanj~jA Sata surUpAdi
aKiLa strIyaroLu strI rUpa vAsavAgiddellarige
viSvAsa tannali koDuva
avaraBilAShegaLa pUraisutippanu yOgyategaLaritu||5||
kOlu kudureya mADi ADuva bAlakara teradaMte
lakShmI lOla svAtantrya guNava brahmAdyaroLagiTTu
lIlegaivanu tannavarige anukUlanAgiddu ella kAladi
Kullarige pratikUlanAgiha prakaTanAgadale||6||
sauparNi varavahana nAnA rUpa nAmadi karesuta avara samIpadalliddu
aKiLa vyApAragaLa mADuvanu
pApa puNyagaLereDu avara svarUpagaLa anusarisi uNipa
parOpakAri parESa pUrNAnanda j~jAna Gana||7||
AhAra nidrA maithunagaLa aharAhara bayasi baLaluva
lakShmI mahitana mahA mahimegaLanu entariva nityadali
ahika sauKyava maredu manadali grahisi SAstrArthagaLa
paramOtsAhadi konDADutale maimaredavarigalladale||8||
baMdhamOkSha pradana j~jAnavu mandamatigaLigentu dorevudu
bindu mAtra suKAnuBava parvatake sama duHKavendu tiLiyade
anya daivagaLinda suKava apEkShisuvaru
mukundana ArAdhaneya biTTavage unTe mukti suKa||9||
rAja tanna amAtya karuNadi naija janarige koTTu kArya niyOjisuta
mAnApamAnava mALpa teradante
SrI janArdhana sarvaroLage aparAjitanu tAnAgi
sarva prayOjanava mADisuta mADuva Palake gurimADi||10||
vAsudEva svatantrava sarojAsanAdi amarAsurarige IyalOsuga ardhava tegedu
adaroLardhava caturBAgagaisi
vandanu Satavidha dvi pancASatAbjajage
aShTa catvAriMSad anilagitta vANI BAratIgardha||11||
dvitIya pAdava tegedukonDu ada Sata viBAgava mADi
tA viMSati umESanoLiTTa indranoLu aidadhika hattu
ratipanoLage initiTTa aKiLa dEvategaLoLage Iraidu
jIva pratatiyoLu daSa aidadhika nAlvattu daityaroLu||12||
kAruNika svAtantryatvava mUru vidhagaisi eraDu tannoLu
nArigondanu koTTa svAtantryava sarvarige dhAruNipa tanna anugarige
vyApAra koTTu guNAguNagaLa vicAra mADuva teradi
triguNa vyaktiyane mALpa||13||
puNya karmake sahAyavAguva dhanyarige kalyAdi daityara
puNya PalagaLanIva divijara pApa karma PalAnya karmava mALparige
anuguNya janarige koDuva
bahu kAruNya sAgaranu I teradi Baktaranu saMtaipa||14||
nirupamage sariyunTendu uccarisuvava tadBaktaroLu matsarisuvava
guNaguNigaLige BEdagaLa pELuvava
dara sudarSana Urdhva punDrava dharisuvaroLu dvEShisuva
hari caritegaLa kELadale lOgara vArte kELuvava||15||
EvamAdI dvEShavuLLa kujIvarellaru daityareMbaru
kOvidara vij~jAna karmava nODi niMdiparu
dEva dEvana biTTu yAvatjIva paryaMtaradi tuccara sEveyinda
upajIvisuvaru aj~jAnake oLagAgi||16||
kAma lOBa krOdha mada hiMsAmaya anRuta kapaTa
tridhAmana avatAragaLa BEdApUrNa suKabaddha
AmiSha anivEdita aBOjyadi tAmasa annavanu uMba tAmasa
SrI madAMdhara saMgadiMdali tamave vardhipudu||17||
j~jAna Bakti virakti vinaya purANa SravaNa SAstra cintana
dAna Sama dama yaj~ja satya ahiMsa BUtadaya
dhyAna BagavannAma kIrtana mauna japa tapa vrata
sutIrtha snAna mantra stOtra vandana sajjanara guNavu||18||
lESa svAtaMtrya guNavanu pravESagaisida kAraNadi
guNa dOShagaLu tOruvavu satyAsatya jIvaroLu
SvAsa BOjana pAna Sayana vilAsa maithuna gamana haruSha
klESha svapna suShupti jAgratiyu ahavu cEtanake||19||
ardha tannoLagirisi uLidondardhava viBAgagaisi
vRujina ardananu pUrvadali svAtantryava koTTante
svardhunIpita koDuva avara suKa vRuddhi gOsuga
brahma vAyu kapardi modalAda avaroLiddu avara yOgyateyanaritu||20||
haladharAnuja mALpa kRutyava tiLiyade ahankAradinda
ennuLidu vidhi niShEdha pAtrarillaveMbuvage
PalagaLa dvayakoDuva daityara kaluSha karmava biTTu puNyava seLedu
tanULagiTTu kramadiM koDuva Baktarige||21||
tOyajAptana kiraNa vRukSha CAya vyaktisuvante
kamaladaLAyatAkShanu sarvaroLu vyApisida kAraNadi
hEya sadguNa karma tOrpavu nyAya kOvidarige
niraMtara SrIyarasa sarvOttamOttamanu endu pELuvaru||22||
mUla kAraNa prakRutiyenipa mahAlakumi ellaroLagiddu sulIlegaivuta
puNya pApagaLarpisalu patige
pAlagaDaloLu bidda jala kIlAlavu enipude
jIvakRuta karmALi tadvatu SuBavenipavu ella kAladali||23||
j~jAna suKa bala pUrNa viShNuvige Enu mALpavu triguNa kArya
kRuSAnuvina kRumikavidu BakShipadunTe lOkadoLu
I naLinajAnDavanu brahma ISAna muKya surAsurara
kAlAnaLanavoL nunguvage I pApagaLa Bayave||24||
mOda Sira dakShiNa supakSha pramOda uttara pakShavendu
RugAdi SrutigaLu pELuvavu AnaMdamaya harige
mOda vaiShika suKa viSiShTa pramOda pAratrika suKapradanu
Ada kAraNadinda mOda pramOdanu enisidanu||25||
eMdigAdaru vRuShTiyinda vasundhareyoLagippa
aKiLa jaladiM sindhu vRuddhiyanu aiduvade bAradire baridahude
kundu korategaLilladiha svAnaMda saMpUrNa svaBAvage
bandu mADuvadEnu karmAkarma janya Pala||26||
dEha vRukShadoLu eraDu pakShigaLihavu endigu biDade parama snEhadindali
karmaja PalagaLuMba jIva Kaga
SrI hariyu tA sAraBOktanu drOhisuva kalyAdi daitya samUhake
Iva viSiShTa pApava lESavellarige||27||
dyumaNi kiraNava kanDa mAtradi timiravu ODuva teradi
lakShmI ramaNa nODida mAtradinda aGa nASavu aiduvadu
kamala saMBava muKya ellA sumanasaroLu iha pApa rASiya
amaramuKanandadali Basmava mALpa hari tAnu||28||
catura Sata BAgadi daSAMSadoLu itara jIvarigIva
lESava ditija dEvakkaLige koDuva viSiShTa duHKa suKa
mativihIna prANigaLige Ahutiya suKa mRuti duHKa
avara yOgyateyanaritu pipIlamaSakAdigaLigIva hari||29||
nitya nanirayAndhAKya kUpadi BRutyarindoDagUDi
punarAvRutti varjita lOkavaiduva kaliyu dvEShadali
satya lOkAdhipa caturmuKa tatva dEvakkaLa sahita
nijamuktiya aiduva hari padAbjava Bajisi Bakutiyali||30||
vidhi niShEdhagaLu eraDu mareyade madhu virOdhiya pAdakarpisu
aditi makkaLigIva puNyava pApa daityarige
sudarSana dharege Iyadire bandodagi oyvaru puNya daityaru
adhiparillada vRukShagaLa Paladante nityadali||31||
tilaja kalmaSa tyajisi dIpavu tiLiya tailava grahisi
mandiradoLage vyApisippa kattale Bangisuva teradi
kali modalugonDa aKiLa dAnava kulajaru anudina mALpa puNyaja Palava
brahmAdyarige koTTu allallE ramisuvanu||32||
iddaleyu nityadali mEdhyAmEdhya vastugaLunDu
lOkadi Suddha Suciyendenisi koMbanu vEda smRutigaLoLu
buddhipUrvakavAgi vibudharu Sraddheyinda arpisida karma
niShiddhavAdaru sariyE kaikonDu uddharisutippa||33||
oDeyaridda vanastha PalagaLa baDidu tiMbuvarunTe
kaMDare hoDedu bisuTuvareMba BayadiM nODalanjuvaru
biDade mADuva karmagaLa mane maDadi makkaLu bandhugaLu
kAroDalana ALgaLeMda mAtradali ODuvavu durita||34||
j~jAna karma indriyagaLinda EnEnu mADuva karmagaLa
lakShmI nivAsanige arpisutaliru kAlakAladali
prANa pati kaikonDu nAnA yOniyaidisanu
omme koDadire dAnavaru seLedoyvaru ellA puNya rASigaLa||35||
Sruti smRuti arthava tiLidu ahaMmati viSiShTanu karma mADalu
pratigrahisanu pApagaLanu koDutippa nitya hari
catura daSa Buvana adhipati kRuta kRuta kRutaj~ja niyAmakanuyene
matiBraMSa pramAda sankaTa dOShavAgilla||36||
vArijAsana muKyaru Aj~jAdhArakaru sarva svatantra ramAramaNanu
endaridu iShTAniShTa karmaPala
sAraBOktanige arpisalu svIkAra mADuva
pApaPalava kubEra nAmaka daityarige koTTu avara nOyisuva||37||
krUra daityaroLiddu tAnE prErisuva kAraNadi harige kubEraneMbaru
ellaroLu nirgata ratige nirati
sUri gamyage sUryaneMbaru dUra SOkage Sukla linga SarIra
illada kAraNadi akAyanenisuvanu||38||
pELalu vaSavallada mahA pApALigaLanu oMdE kShaNadi nirmUlagaisalu bEku
eMbuvage ondE harinAma
nAligeyoLuLLavage parama kRupALu kRuShNanu kaiviDidu
tanna AlayadoLiTTu anudinadi Ananda paDisuvanu||39||
rOgi auShadha pathyadinda nirOgiyenisuva teradi
SrImadBAgavata suSravaNagaidu BavAKya rOgavanu nIgi
SabdhAdi aKiLa viShaya niyOgisu daSa indriya anilanoLu
SrI guru jagannAtha viThala prItanAguvanu||40||
One thought on “Kreedavilasa sandhi”