hari kathamrutha sara · jagannatha dasaru · MADHWA · srida vittala

Hari kathamruta saara Phala sruthi sandhi

ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯ
ಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಹರಿಕಥಾಮೃತಸಾರ ಶ್ರೀಮದ್ಗುರುವರ
ಜಗನ್ನಾಥ ದಾಸರ ಕರತಲಾಮಲಕವನೆ
ಪೇಳಿದ ಸಕಲ ಸಂಧಿಗಳ
ಪರಮ ಪಂಡಿತ ಮಾನಿಗಳು
ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು
ತೋರಿ ಪೇಳುವದಲ್ಲ ಧರೆಯೊಳಗೆ||1||

ಭಾಮಿನೀ ಷಟ್ಪದಿಯ ರೂಪದಲೀ
ಮಹಾದ್ಭುತ ಕಾವ್ಯದಾದಿಯೊಳಾ
ಮನೋಹರ ತರತರಾತ್ಮಕ ನಾಂದಿ ಪದ್ಯಗಳ
ಯಾಮಯಾಮಕೆ ಪಠಿಸುವವರ
ಸುಧಾಮಸ ಕೈಪಿಡಿಯಲೋಸುಗ
ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||

ಸಾರವೆಂದರೆ ಹರಿಕಥಾಮೃತ
ಸಾರವೆಂಬುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ
ಸಾರಥಿಯ ಬಲಗೊಂಡು ಸಾರಾ
ಸಾರಗಳ ನಿರ್ಣೈಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||

ದಾಸವರ್ಯರ ಮುಖದಿ ನಿಂದು
ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ
ವರ್ಣಾಭಿಮಾನಿಗಳೊಲಿದು ಪೇಳಿಸಿದ
ಈ ಸುಲಕ್ಷಣ ಕಾವ್ಯದೊಳಗ್ಯತಿ
ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||

ಪ್ರಾಕೃತೋಕ್ತಿಗಳೆಂದು ಬರಿದೆ
ಮಹಾಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು
ಶ್ರೀಕೃತೀಪತಿ ಅಮಲ ಗುಣಗಳು
ಈ ಕೃತಿಯೊಳುoಟಾದ ಬಳಿಕ
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||

ಶ್ರುತಿಗೆ ಶೋಭನಮಾಗದಡೆ
ಜಡಮತಿಗೆ ಮಂಗಳವೀಯದಡೆ
ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ
ಮಥಿಸಿ ಮಧ್ವಾಗಮ ಪಯೋಬ್ಧಿಯ
ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ
ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||

ಭಕ್ತಿವಾದದಿ ಪೇಳ್ದನೆಂಬ
ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ
ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ
ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ
ವಿಭಕ್ತಿ ವಿಷಮಗಳಿರಲು
ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||

ಆಶುಕವಿಕುಲ ಕಲ್ಪತರು
ದಿಗ್ದೇಶವರಿಯಲು ರಂಗನೊಲುಮೆಯ
ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು
ಈ ಸುಲಕ್ಷಣ ಹರಿಕಥಾಮೃತ
ಮೀಸಲರಿಯದೆ ಸಾರದೀರ್ಘ
ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||

ಪ್ರಾಸಗಳ ಪೊಂದಿಸದೆ ಶಬ್ದ
ಶ್ಲೇಷಗಳ ಶೋಧಿಸದೆ ದೀರ್ಘ
ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ
ದೂಷಕರು ದಿನದಿನದಿ ಮಾಡುವ
ದೂಷಣೆಯೆ ಭೂಷಣಗಳೆಂದುಪ
ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||

ಅಶ್ರುತಾಗಮ ಇದರ ಭಾವ
ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ
ಮಳೆಗರೆಸಿ ಮರೆಸುವ ಚಮತ್ಕ್ರುತಿಯ
ಮಿಶ್ರರಿಗೆ ಮರೆ ಮಾಡಿ ದಿವಿಜರ
ಜಸ್ರದಲಿ ಕಾಯ್ದಿಪ್ಪರಿದರೊಳು
ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||

ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ
ಭಾಗ್ಯವು ಪೆಚ್ಚ ಪೇರ್ಮೆಯು
ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ
ಉಚ್ಚವಿಗಳಿಗೆ ಪೊಚ್ಚ ಪೊಸೆದನ
ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ
ಸಿರಿವತ್ಸ ಲಾಂಛನ ಮೆಚ್ಚಲೇನರಿದು||11||

ಸಾಧು ಸಭೆಯೊಳು ಮೆರೆಯೆ ತತ್ವ
ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ
ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ
ವಾದಿಗಳ ಪಲ್ಮುರಿಯೆ ಪರಮ
ವಿನೋದಿಗಳ ಮೈಮರೆಯಲೋಸುಗ
ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ||12||

ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ
ಪ್ರಭುವರ್ಯ ಪುರಂದರದಾಸರಾಯರ
ದಯವೋ ತಿಳಿಯದು ಓದಿ ಕೇಳದಲೆ
ಕೇಶವನ ಗುಣಮಣಿಗಳನು
ಪ್ರಾಣೇಶಗರ್ಪಿಸಿ ವಾದಿರಾಜರ
ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು||13||

ಹರಿಕಥಾಮೃತಸಾರ ನವರಸಭರಿತ
ಬಹು ಗಂಭೀರ ರತ್ನಾಕರ
ರುಚಿರ ಶೃಂಗಾರ ಸಾಲಂಕಾರ ವಿಸ್ತಾರ
ಸರಸ ನರ ಕಂಠೀರವಾಖ್ಯಾರ್ಯರ
ಜನಿತ ಸುಕುಮಾರ ಸಾತ್ವೀಕರಿಗೆ
ಪರಮೋದಾರ ಮಾಡಿದ ಮರೆಯದುಪಕಾರ||14||

ಅವನಿಯೊಳು ಜ್ಯೋತಿಷ್ಮತೀ ತೈಲವನು
ಪಾಮರನುಂಡು ಜೀರ್ಣಿಸಲವನೆ
ಪಂಡಿತನೋಕರಿಪವಿವೇಕಿಯಪ್ಪಂತೆ
ಶ್ರವಣ ಮಂಗಳ ಹರಿಕಥಾಮೃತ
ಸವಿದು ನಿರ್ಗುಣಸಾರ ಮಕ್ಕಿಸಲವ
ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು||15||

ಅಕ್ಕರದೊಳೀ ಕಾವ್ಯದೊಳೊಂದಕ್ಕರವ
ಬರೆದೋದಿದವ ದೇವರ್ಕಳಿಂ
ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ
ಲೆಕ್ಕಿಸದೆ ಲೋಕೈಕನಾಥನ
ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ
ಹರಿಕಥಾಮೃತಸಾರ ಸೊಗಸುವದೆ||16||

ವತ್ತಿಬಹ ವಿಘ್ನಗಳ ತಡೆದಪ
ಮೃತ್ಯುವಿಗೆ ಮರೆಮಾಡಿ ಕಾಲನ
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ
ಎತ್ತಿಗೊಳ್ಳಿಸಿ ವನರುಹೇಕ್ಷಣ
ನ್ರುತ್ಯಮಾಡುವವನ ಮನೆಯೊಳು
ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ||17||

ಆಯುರಾರೋಗ್ಯೈಶ್ವರ್ಯ ಮಾಹಾಯಶೋ
ಧೈರ್ಯ ಬಲ ಸಮ ಸಹಾಯ
ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ
ಆಯುತಗಳುಂಟಾಗಲೊಂದಧ್ಯಾಯ
ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ
ಹರಿಕಥಾಮೃತಸಾರ ಸುಜನರಿಗೆ||18||

ಕುರುಡ ಕಂಗಳ ಪಡೆವ ಬಧಿರನಿಗೆರೆಡು
ಕಿವಿ ಕೇಳ್ಬಹವು ಬೆಳೆಯದ
ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ
ಬರಡು ಹೈನಾಗುವದು ಪೇಳ್ದರೆ
ಕೊರಡು ಪಲ್ಲೈಸುವದು ಪ್ರತಿದಿನ
ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ||19||

ನಿರ್ಜರ ತರಂಗಿಣಿಯೊಳನುದಿನ
ಮಜ್ಜನಾದಿ ಸಮಸ್ತ ಕರ್ಮ
ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ
ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ
ಸಜ್ಜನರು ಶಿರತೂಗುವಂದದಿ

ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ||20||

ಸತಿಯರಿಗೆ ಪತಿಭಕುತಿ ಪತ್ನೀವ್ರತ
ಪುರುಷರಿಗೆ ಹರುಷ ನೆಲೆಗೊಂಡತಿ
ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ
ಸತತ ಮಂಗಳವೀವ ಬಹು
ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ
ಪಡೆವರು ಹರಿಕಥಾಮೃತಸಾರವನು ಪಠಿಸೆ||21||

ಎಂತು ಬಣ್ಣಿಸಲೆನ್ನಳವೆ
ಭಗವಂತನಮಲ ಗುಣಾನುವಾದಗಳೆಂತು
ಪರಿಯಲಿ ಪೂರ್ಣಬೋಧರ ಮತವ ಪೊಂದಿದರ
ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ
ಪೂರ್ವಕವಾಗಿ ಪೇಳ್ದ ಮಹಂತರಿಗೆ
ನರರೆಂದು ಬಗೆವರೆ ನಿರಯ ಭಾಗಿಗಳು||22||

ಮಣಿಖಚಿತ ಹರಿವಾಣದೊಳು ವಾರಣ
ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ
ಪಸಿದವರಿಗೋಸುಗ ನೀಡುವಂದದಲಿ
ಪ್ರಣತರಿಗೆ ಪೊಂಗನಡ ವರ
ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ
ನೋಡುವ ಹರಿಕಥಾಮೃತಸಾರ ವನುದಾರ||23||

ದುಷ್ಟರೆನ್ನದೆ ದುರ್ವಿಷಯದಿಂ
ಪುಷ್ಟರೆನ್ನದೆ ಪೂತಕರ್ಮ
ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ
ಕೃಷ್ಣ ಕೈಪಿಡಿವನು ಸುಸತ್ಯ
ವಿಶಿಷ್ಟ ದಾಸತ್ವವನು ಪಾಲಿಸಿ
ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ||24||

5 thoughts on “Hari kathamruta saara Phala sruthi sandhi

  1. Dear Sir, Please can you provide the English wordings of this Sandhi too? This would then complete the English wording of all Sandhis as done in previous Sandhis. Many thanks for such a great service to all Madhwas as well as humanity in general.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s