hari kathamrutha sara · jagannatha dasaru · MADHWA

Karuna sandhi

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದು
ಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯ
ಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು ಭೂಸುರರು ದಿನದಿನದಿ||1||

ಮಳೆಯ ನೀರು ಓಣಿಯೊಳು ಪರಿಯಲು, ಬಳಸರು ಊರೊಳಗೆ ಇದ್ದ ಜನರು
ಆ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು
ಕಲುಷ ವಚನಗಳ ಆದಡೆಯು, ಬಾಂಬೊಳೆಯ ಪೆತ್ತನ ಪಾದ ಮಹಿಮ
ಆ ಜಲದಿ ಪೊಕ್ಕದರಿಂದ ಮಾಣ್ದಪರೆ ಮಹೀಸುರರು||2||

ಶೃತಿತತಿಗಳ ಅಭಿಮಾನಿ ಲಕ್ಷ್ಮೀಸ್ತುತಿಗಳಿಗೆ ಗೋಚರಿಸದ
ಅಪ್ರತಿಹತ ಮಹೈಶ್ವರ್ಯಾದಿ ಅಖಿಲ ಸದ್ಗುಣ ಗಣಾಂಭೋಧಿ
ಪ್ರತಿದಿವಸ ತನ್ನಂಘ್ರಿ ಸೇವಾರತ ಮಹಾತ್ಮರು ಮಾಡುತಿಹ
ಸಂಸ್ತುತಿಗೆವಶನಾಗುವೆನು ಇವನ ಕಾರುಣ್ಯಕೆ ಏನೆಂಬೆ||3||

ಮನವಚನಕೆ ಅತಿದೂರ ನೆನೆವರನು ಅನುಸರಿಸಿ ತಿರುಗುವನು ಜಾಹ್ನವಿ ಜನಕ
ಜನರೊಳಗಿದ್ದು ಜನಿಸುವ ಜಗದುದರ ತಾನು
ಘನಮಹಿಮ ಗಾಂಗೇಯನುತ ಗಾಯನವ ಕೇಳುತ
ಗಗನಚರ ವಾಹನ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ||4||

ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ
ಕುಳಿತು ಪಾಡಲು ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ
ಸುಲಭನೋ ಹರಿ ತನ್ನವರನು ಅರಘಳಿಗೆ ಬಿಟ್ಟಗಲನು
ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ||5||

ಮನದೊಳಗೆ ತಾನಿದ್ದು ಮನವೆಂದು ಎನಿಸಿಕೊಂಬನು
ಮನದ ವೃತ್ತಿಗಳ ಅನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ
ಮನವಿತ್ತರೆ ತನ್ನನೀವನು ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗೆ
ಇತ್ತಪನು ಸ್ವರ್ಗಾದಿ ಭೋಗಗಳ||6||

ಪರಮ ಸತ್ಪುರುಷಾರ್ಥರೂಪವನು ಹರಿಯು ಲೋಕಕೆ ಎಂದು
ಪರಮಾದರದಿ ಸದುಪಾಸನೆಯ ಗೈವರಿಗೆ ಇತ್ತಪನು ತನ್ನ
ಮರೆದು ಧರ್ಮಾರ್ಥಗಳ ಕಾಮಿಸುವರಿಗೆ ನಗುತ ಅತಿಶೀಘ್ರದಿಂದಲಿ
ಸುರಪತನಯ ಸುಯೋಧನರಿಗೆ ಇತ್ತಂತೆ ಕೊಡುತಿಪ್ಪ ||7||

ಜಗವನೆಲ್ಲವ ನಿರ್ಮಿಸುವ ನಾಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ
ಸ್ವಗತಭೇದ ವಿವರ್ಜಿತನು ಸರ್ವಗ ಸದಾನಂದೈಕ ದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ||8||

ಒಬ್ಬನಲಿ ನಿಂದಾಡುವನು ಮತ್ತೊಬ್ಬನಲಿ ನೋಡುವನು
ಬೇಡುವನು ಒಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ
ಅಬ್ಬರದ ಹೆದ್ದೈವನು ಇವ ಮತ್ತೊಬ್ಬರನ ಲೆಕ್ಕಿಸನು
ಲೋಕದೊಳು ಒಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ||9||
ಶರಣಜನ ಮಂದಾರ ಶಾಶ್ವತ ಕರುಣಿ ಕಮಲಾಕಾಂತ ಕಾಮದ
ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ
ನಿರುಪಮಾನಂದಾತ್ಮ ನಿರ್ಗತ ದುರಿತ ದೇವವರೇಣ್ಯನೆಂದು
ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ||10||

ಜನನಿಯನು ಕಾಣದಿಹ ಬಾಲಕ ನೆನೆನೆನದು ಹಲುಬುತಿರೆ
ಕತ್ತಲೆ ಮನೆಯೊಳು ಅಡಗಿದ್ದು ಅವನ ನೋಡುತ ನಗುತ ಹರುಷದಲಿ
ತನಯನಂ ಬಿಗಿದಪ್ಪಿ ರಂಬಿಸಿ ಕನಲಿಕೆಯ ಕಳೆವಂತೆ
ಮಧುಸೂದನನು ತನ್ನವರು ಇದ್ದೆಡೆಗೆ ಬಂದೊದಗಿ ಸಲಹುವನು||11||

ಇಟ್ಟಿಕಲ್ಲನು ಭಕುತಿಯಿಂದಲಿ ಕೊಟ್ಟ ಭಕುತಗೆ ಮೆಚ್ಚಿ ತಣ್ಣನೆ ಕೊಟ್ಟ
ಬಡಬ್ರಾಹ್ಮಣನ ಒಪ್ಪಿಡಿಯವಲಿಗೆ ಅಖಿಳಾರ್ಥ
ಕೆಟ್ಟ ಮಾತುಗಳೆಂದ ಚೈದ್ಯನ ಪೊಟ್ಟೆಯೊಳಗಿಂಬಿಟ್ಟ
ಬಾಣದಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು||12||

ಧನವ ಸಂರಕ್ಷಿಸುವ ಫಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ
ಅನುದಿನದಿ ನೋಡುತ ಸುಖಿಸುವಂದದಿ
ಲಕುಮಿವಲ್ಲಭನು ಪ್ರಣತರನು ಕಾಯ್ದಿಹನು ನಿಷ್ಕಾಮನದಿ
ನಿತ್ಯಾನಂದಮಯ ದುರ್ಜನರ ಸೇವೆಯನು ಒಲ್ಲನು ಅಪ್ರತಿಮಲ್ಲ ಜಗಕೆಲ್ಲ||13||

ಬಾಲಕನ ಕಲಭಾಷೆ ಜನನಿ ಕೇಳಿ ಸುಖಪಡುವಂತೆ
ಲಕ್ಷ್ಮೀಲೋಲ ಭಕ್ತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು
ತಾಳ ತನ್ನವರಲ್ಲಿ ಮಾಡ್ವ ಅವಹೇಳನವ
ಹೆದ್ದೈವ ವಿದುರನ ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ||14||

ಸ್ಮರಿಸುವವರ ಅಪರಾಧಗಳ ತಾಸ್ಮರಿಸ ಸಕಲ ಇಷ್ಟ ಪ್ರದಾಯಕ
ಮರಳಿ ತನಗೆ ಅರ್ಪಿಸಲು ಕೊಟ್ಟುದ ಅನಂತಮಡಿ ಮಾಡಿ ಪರಿಪರಿಯಲಿಂದ ಉಣಿಸಿ
ಸುಖ ಸಾಗರದಿ ಲೋಲಾಡಿಸುವ ಮಂಗಳಚರಿತ
ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ||15||

ಏನು ಕರುಣನಿಧಿಯೋ ಹರಿ ಮತ್ತೇನು ಭಕ್ತಾಧೀನನೋ
ಇನ್ನೇನು ಈತನ ಲೀಲೆ ಇಚ್ಚಾಮಾತ್ರದಲಿ ಜಗವ ತಾನೇ ಸೃಜಿಸುವ ಪಾಲಿಸುವ
ನಿರ್ವಾಣ ಮೊದಲಾದ ಅಖಿಲ ಲೋಕಸ್ಥಾನದಲಿ
ಮತ್ತೆ ಅವರನು ಇಟ್ಟು ಆನಂದ ಬಡಿಸುವನು||16||

ಜನಪ ಮೆಚ್ಚಿದರೆ ಈವ ಧನವಾಹನ ವಿಭೂಷಣ ವಸನಭೂಮಿ
ತನುಮನಗಳ ಇತ್ತು ಆದರಿಪರು ಉಂಟೇನೋ ಲೋಕದೊಳು
ಅನವರತ ನೆನೆವವರ ಅನಂತಾಸನವೆ ಮೊದಲಾದ ಆಲಯದೊಳಿಟ್ಟು
ಅಣುಗನಂದದಲಿ ಅವರ ವಶನಾಗುವ ಮಹಾಮಹಿಮ||17||

ಭುವನ ಪಾವನ ಚರಿತ ಪುಣ್ಯಶ್ರವಣಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ
ಯುವತಿವೇಷದಿ ಹಿಂದೆ ಗೌರೀಧವನ ಮೋಹಿನಿ ಕೆಡಿಸಿ ಉಳಿಸಿದ
ಇವನ ಮಾಯವ ಗೆಲುವನಾವನು ಈ ಜಗತ್ರಯದಿ||18||

ಪಾಪಕರ್ಮವ ಸಹಿಸುವಡೆ ಲಕ್ಷ್ಮೀಪತಿಗೆ ಸಮರಾದ ದಿವಿಜರನು
ಈ ಪಯೋಜಭವಾಂಡದೊಳಗೆ ಆವಲ್ಲಿ ನಾ ಕಾಣೆ
ಗೊಪಗುರುವಿನ ಮಡದಿಭೃಗುನಗಚಾಪ ಮೊದಲಾದವರು ಮಾಡ್ದ
ಮಹಾಪರಾಧಗಳ ಎಣಿಸಿದನೆ ಕರುಣಾ ಸಮುದ್ರ ಹರಿ||19||

ಅಂಗುಟಾಗ್ರದಿ ಜನಿಸಿದ ಅಮರತರಂಗಿಣಿಯು ಲೋಕತ್ರಯಗಳ ಅಘಹಿಂಗಿಸುವಳು
ಅವ್ಯಾಕೃತಾಶಾಂತ ವ್ಯಾಪಿಸಿದ ಇಂಗಡಲ ಮಗಳ ಒಡೆಯನ
ಅಂಗೋಪಾಂಗಗಳಲಿ ಇಪ್ಪ
ಅಮಲಾನಂತ ಸುಮಂಗಳಪ್ರದ ನಾಮ ಪಾವನಮಾಳ್ಪದೇನರಿದು||20||
ಕಾಮಧೇನು ಸುಕಲ್ಪತರು ಚಿಂತಾಮಣಿಗಳು
ಅಮರೇಂದ್ರ ಲೋಕದಿ ಕಾಮಿತಾರ್ಥಗಳು ಈವವಲ್ಲದೆ ಸೇವೆ ಮಾಳ್ಪರಿಗೆ
ಶ್ರೀಮುಕುಂದನ ಪರಮ ಮಂಗಳನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು||21||

ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ ಕೈಕೊಂಡು
ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ
ದ್ಯುನದಿ ನಿವಹಗಳಂತೆ ಕೊಟ್ಟು ಅವರನು ಸದಾ ಸಂತೈಸುವನು
ಸದ್ಗುಣವ ಕದ್ದವರ ಅಘವ ಕದಿವನು ಅನಘನೆಂದೆನಿಸಿ||22||

ಚೇತನಾ ಚೇತನ ವಿಲಕ್ಷಣ ನೂತನ ಪದಾರ್ಥಗಳೊಳಗೆ ಬಲುನೂತನ
ಅತಿಸುಂದರಕೆ ಸುಂದರ ರಸಕೆ ರಸರೂಪ
ಜಾತರೂಪೋದರ ಭವ ಆದ್ಯರೊಳು ಆತತ ಪ್ರತಿಮ ಪ್ರಭಾವ
ಧರಾತಳದೊಳು ಎಮ್ಮೊಡನೆ ಆಡುತಲಿಪ್ಪ ನಮ್ಮಪ್ಪ||23||

ತಂದೆ ತಾಯ್ಗಳು ತಮ್ಮ ಶಿಶುವಿಗೆ ಬಂದ ಭಯಗಳ ಪರಿಹರಿಸಿ
ನಿಜ ಮಂದಿರದಿ ಬೇಡಿದುದನು ಇತ್ತು ಆದರಿಸುವಂದದಲಿ
ಹಿಂದೆ ಮುಂದೆ ಎಡಬಲದಿ ಒಳಹೊರಗೆ ಇಂದಿರೇಶನು ತನ್ನವರನು
ಎಂದೆಂದು ಸಲಹುವನು ಆಗಸದೊಳ್ ಎತ್ತ ನೋಡಿದರು||24||

ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವನು
ಒಂದರೆಕ್ಷಣ ಬಿಡದೆ ಬೆಂಬಲವಾಗಿ ಭಕ್ತಾದೀನನೆಂದೆನಿಸಿ
ತಡೆವ ದುರಿತೌಘಗಳ ಕಾಮದ ಕೊಡುವ ಸಕಲೇಷ್ಟಗಳ
ಸಂತತ ನಡೆವ ನಮ್ಮಂದದಲಿ ನವಿಸು ವಿಶೇಷ ಸನ್ಮಹಿಮ||25||

ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹುಕಠಿಣನಿವ
ಶಿಷ್ಟೇಷ್ಟನೆಂದರಿದು ಅನವರತ ಸದ್ಭಕ್ತಿ ಪಾಶದಲಿ ಕಟ್ಟುವರ
ಭವಕಟ್ಟು ಬಿಡಿಸುವ ಸಿಟ್ಟಿನವನು ಇವನಲ್ಲ
ಕಾಮದ ಕೊಟ್ಟುಕಾವನು ಸಕಲ ಸೌಖ್ಯವನು ಇಹಪರಂಗಗಳಲಿ ||26||

ಕಣ್ಣಿಗೆ ಎವೆಯಂದದಲಿ ಕೈ ಮೈ ತಿಣ್ಣಿಗೊದಗುವ ತೆರದಿ
ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ
ಪುಣ್ಯ ಫಲವ ಈವಂದದಲಿ ನುಡಿವೆಣ್ಣಿ ನಾಣ್ಮಾoಡದೊಳು
ಲಕ್ಷ್ಮಣನ ಅಣ್ಣನು ಒದಗುವ ಭಕ್ತರ ಅವಸರಕೆ ಅಮರಗಣ ಸಹಿತ||27||

ಕೊಟ್ಟದನು ಕೈಕೊಂಬ ಅರೆಕ್ಷಣಬಿಟ್ಟಗಲ ತನ್ನವರ
ದುರಿತಗಳ ಅಟ್ಟುವನು ದೂರದಲಿ ದುರಿತಾರಣ್ಯ ಪಾವಕನು
ಬೆಟ್ಟ ಬೆನ್ನಿಲಿ ಹೊರಿಸಿದವರೊಳು ಸಿಟ್ಟು ಮಾಡಿದನೇನೋ ಹರಿ
ಕಂಗೆಟ್ಟ ಸುರರಿಗೆ ಸುಧೆಯನು ಉಣಿಸಿದ ಮುರಿದನಹಿತರನಾ||28||

ಖೇದ ಮೋದ ಜಯಾಪಾಜಯ ಮೊದಲಾದ ದೋಷಗಳಿಲ್ಲ ಚಿನ್ಮಯ ಸಾದರದಿ
ತನ್ನಂಘ್ರಿಕಮಲವ ನಂಬಿ ಸ್ತುತಿಸುವರ ಕಾದುಕೊಂಡಿಹ
ಪರಮಕರುಣ ಮಹೋದಧಿಯು ತನ್ನವರು ಮಾಡ್ದ
ಮಹಾಪರಾಧಗಳ ನೋಡದಲೆ ಸಲಹುವ ಸರ್ವಕಾಮದನು||29||

ಮೀನಕೂರ್ಮ ವರಾಹ ನರಪಂಚಾನನ ಅತುಳ ಶೌರ್ಯ
ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ
ಧೇನುಕಾಸುರಮಥನ ತ್ರಿಪುರವ ಹಾನಿಗೈನಿಸಿದ ನಿಪುಣ
ಕಲಿಮುಖ ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನಾ||30||

ಶ್ರೀ ಮನೋರಮ ಶಮಲ ವರ್ಜಿತ ಕಾಮಿತಪ್ರದ
ಕೈರವದಳ ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖ
ಸಾಮಸನ್ನುತ ಸಕಲ ಗುಣಗಣಧಾಮ
ಶ್ರೀ ಜಗನ್ನಾಥ ವಿಠಲನು ಈ ಮಹಿಯೊಳು ಅವತರಿಸಿ ಸಲಹಿದ ಸಕಲ ಸುಜನರನಾ||31||

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

SravaNa manakAnandavIvudu Bavajanita duHKagaLa kaLevudu
vividha BOgagaLu ihaparangaLali ittu salahuvudu
Buvana pAvanavenipa lakShmI dhavana mangaLa katheya
parama utsavadi kivigoTTu Alipudu BUsuraru dinadinadi||1||

maLeya nIru ONiyoLu pariyalu, baLasaru UroLage idda janaru
A jalavu heddoregUDe majjanapAna gaidaparu
kaluSha vacanagaLa AdaDeyu, bAMboLeya pettana pAda mahima
A jaladi pokkadarinda mANdapare mahIsuraru||2||

SRutitatigaLa aBimAni lakShmIstutigaLige gOcarisada
apratihata mahaiSvaryAdi aKila sadguNa gaNAMBOdhi
pratidivasa tannanGri sEvArata mahAtmaru mADutiha
saMstutigevaSanAguvenu ivana kAruNyake EneMbe||3||

manavacanake atidUra nenevaranu anusarisi tiruguvanu jAhnavi janaka
janaroLagiddu janisuva jagadudara tAnu
Ganamahima gAngEyanuta gAyanava kELuta
gaganacara vAhana divaukasaroDane carisuva manemanegaLalli||4||

malagi paramAdaradi pADalu kuLitu kELuva
kuLitu pADalu niluva niMtare naliva nalidare oliva nimageMba
sulaBanO hari tannavaranu araGaLige biTTagalanu
ramAdhavana olisalariyade pAmararu baLaluvaru BavadoLage||5||

manadoLage tAniddu manavendu enisikoMbanu
manada vRuttigaLa anusarisi BOgaMgaLIvanu trividha cEtanake
manavittare tannanIvanu tanuva daMDisi dinadinadi sAdhanava mALparige
ittapanu svargAdi BOgagaLa||6||

parama satpuruShArtharUpavanu hariyu lOkake endu
paramAdaradi sadupAsaneya gaivarige ittapanu tanna
maredu dharmArthagaLa kAmisuvarige naguta atiSIGradindali
surapatanaya suyOdhanarige ittante koDutippa ||7||

jagavanellava nirmisuva nAlmoganoLage tAniddu salahuva
gaganakESanoLiddu saMharisuvanu lOkagaLa
svagataBEda vivarjitanu sarvaga sadAnandaika dEhanu
bagebageya nAmadali karesuva Bakutaranu poreva||8||

obbanali nindADuvanu mattobbanali nODuvanu
bEDuvanu obbanali nIDuvanu mAtADuvanu beragAgi
abbarada heddaivanu iva mattobbarana lekkisanu
lOkadoLu obbanE tA bAdhya bAdhakanAha nirBIta||9||
SaraNajana maMdAra SASvata karuNi kamalAkAMta kAmada
parama pAvanatara sumangaLa carita pArthasaKa
nirupamAnandAtma nirgata durita dEvavarENyaneMdu
Adaradi kareyalu bandodaguvanu tannavara baLige||10||

jananiyanu kANadiha bAlaka nenenenadu halubutire
kattale maneyoLu aDagiddu avana nODuta naguta haruShadali
tanayanaM bigidappi raMbisi kanalikeya kaLevaMte
madhusUdananu tannavaru iddeDege baMdodagi salahuvanu||11||

iTTikallanu Bakutiyindali koTTa Bakutage mecci taNNane koTTa
baDabrAhmaNana oppiDiyavalige aKiLArtha
keTTa mAtugaLenda caidyana poTTeyoLagiMbiTTa
bANadaliTTa BIShmana avaguNagaLeNisidane karuNALu||12||

dhanava saMrakShisuva PaNi tAnuNade mattobbarige koDade
anudinadi nODuta suKisuvandadi
lakumivallaBanu praNataranu kAydihanu niShkAmanadi
nityAnaMdamaya durjanara sEveyanu ollanu apratimalla jagakella||13||

bAlakana kalaBAShe janani kELi suKapaDuvante
lakShmIlOla Baktaru mADutiha saMstutige higguvanu
tALa tannavaralli mADva avahELanava
heddaiva vidurana Alayadi pAluMDu kurupana mAnavane konDa||14||

smarisuvavara aparAdhagaLa tAsmarisa sakala iShTa pradAyaka
maraLi tanage arpisalu koTTuda anantamaDi mADi paripariyalinda uNisi
suKa sAgaradi lOlADisuva maMgaLacarita
cinmayagAtra lOkapavitra sucaritra||15||

Enu karuNanidhiyO hari mattEnu BaktAdhInanO
innEnu Itana lIle iccAmAtradali jagava tAnE sRujisuva pAlisuva
nirvANa modalAda aKila lOkasthAnadali
matte avaranu iTTu AnaMda baDisuvanu||16||

janapa meccidare Iva dhanavAhana viBUShaNa vasanaBUmi
tanumanagaLa ittu Adariparu unTEnO lOkadoLu
anavarata nenevavara anantAsanave modalAda AlayadoLiTTu
aNuganaMdadali avara vaSanAguva mahAmahima||17||

Buvana pAvana carita puNyaSravaNakIrtana pApanASana
kaviBirIDita kairavadaLaSyAma nissIma
yuvativEShadi hiMde gaurIdhavana mOhini keDisi uLisida
ivana mAyava geluvanAvanu I jagatrayadi||18||

pApakarmava sahisuvaDe lakShmIpatige samarAda divijaranu
I payOjaBavAnDadoLage Avalli nA kANe
gopaguruvina maDadiBRugunagacApa modalAdavaru mADda
mahAparAdhagaLa eNisidane karuNA samudra hari||19||

aMguTAgradi janisida amaratarangiNiyu lOkatrayagaLa aGahingisuvaLu
avyAkRutASAnta vyApisida ingaDala magaLa oDeyana
aMgOpAMgagaLali ippa
amalAnaMta sumaMgaLaprada nAma pAvanamALpadEnaridu||20||

kAmadhEnu sukalpataru cintAmaNigaLu
amarEndra lOkadi kAmitArthagaLu Ivavallade sEve mALparige
SrImukundana parama maMgaLanAma narakastharanu salahitu
pAmarara paMDitarenisi puruShArtha koDutihudu||21||

manadoLage sundara padArthava nenedu koDe kaikoMDu
balu nUtana suSOBita gandha surasOpEta PalarASi
dyunadi nivahagaLante koTTu avaranu sadA saMtaisuvanu
sadguNava kaddavara aGava kadivanu anaGaneMdenisi||22||

cEtanA cEtana vilakShaNa nUtana padArthagaLoLage balunUtana
atisuMdarake sundara rasake rasarUpa
jAtarUpOdara Bava AdyaroLu Atata pratima praBAva
dharAtaLadoLu emmoDane ADutalippa nammappa||23||

tande tAygaLu tamma SiSuvige baMda BayagaLa pariharisi
nija mandiradi bEDidudanu ittu Adarisuvandadali
hiMde munde eDabaladi oLahorage indirESanu tannavaranu
endendu salahuvanu AgasadoL etta nODidaru||24||

oDala neLalandadali hari nammoDane tiruguvanu
oMdarekShaNa biDade beMbalavAgi BaktAdInanendenisi
taDeva duritauGagaLa kAmada koDuva sakalEShTagaLa
santata naDeva nammandadali navisu viSESha sanmahima||25||

biTTavara BavapASadindali kaTTuvanu bahukaThiNaniva
SiShTEShTanendaridu anavarata sadBakti pASadali kaTTuvara
BavakaTTu biDisuva siTTinavanu ivanalla
kAmada koTTukAvanu sakala sauKyavanu ihaparangagaLali ||26||

kaNNige eveyandadali kai mai tiNNigodaguva teradi
palgaLu paNNu PalagaLanagidu jihvege rasavanIvante
puNya Palava IvaMdadali nuDiveNNi nANmAoDadoLu
lakShmaNana aNNanu odaguva Baktara avasarake amaragaNa sahita||27||

koTTadanu kaikoMba arekShaNabiTTagala tannavara
duritagaLa aTTuvanu dUradali duritAraNya pAvakanu
beTTa bennili horisidavaroLu siTTu mADidanEnO hari
kangeTTa surarige sudheyanu uNisida muridanahitaranA||28||

KEda mOda jayApAjaya modalAda dOShagaLilla cinmaya sAdaradi
tannaMGrikamalava naMbi stutisuvara kAdukonDiha
paramakaruNa mahOdadhiyu tannavaru mADda
mahAparAdhagaLa nODadale salahuva sarvakAmadanu||29||

mInakUrma varAha narapancAnana atuLa Saurya
vAmana rENukAtmaja rAvaNAdiniSAcaradhvaMsi
dhEnukAsuramathana tripurava hAnigainisida nipuNa
kalimuKa dAnavara saMharisi dharmadi kAyda sujanaranA||30||

SrI manOrama Samala varjita kAmitaprada
kairavadaLa SyAma Sabala SaraNya SASvata SarkarAkSha saKa
sAmasannuta sakala guNagaNadhAma
SrI jagannAtha viThalanu I mahiyoLu avatarisi salahida sakala sujanaranA||31||

3 thoughts on “Karuna sandhi

  1. I can only speak in kannada though it is my mother tongue . I’m now learning to read and write. For thousands of people like me, your contribution is of great use . I consider it as a God’s gift. Thank you very much.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s