ಧ್ರುವತಾಳ
ಜಲಜಸಂಭವನ ಪಟ್ಟಕ್ಕೇರುವ ಗುರುವೆ
ಇಳೆಯೊಳು ಕೋತಿ ಕಾಯ ಧರಿಸಿ ಪುಟ್ಟಿದ್ದೇನೊ
ಬಲು ಪ್ರಳಯದಲ್ಲಿ ಜಾಗ್ರತನಾಗಿದ್ದ ಮರುತ
ಕುಲಿಶ ಧರನಿಂದನೊಂದು ಮೂರ್ಛೆಗೊಂಡಿದ್ದೇನೊ
ಕೆಲಕಾಲ ಸಮಸ್ತ ಶ್ರುತಿ ನಿರ್ಣಯದಂತೆ
ಜಲಜಾಪ್ತನಲ್ಲಿ ನಿಂದು ಓದು ಓದಿದ್ದೇನೊ
ಬಲವಂತನಾಗಿ ಸುರರಕೈಯ ಕಪ್ಪವ ಕೊಂಬುವನೆ
ಒಲಿದು ಸುಗ್ರೀವಂಗೆ ದೂತನಾದದ್ದೇನೊ
ಗಳಿಗೆ ಬಿಡದೆ ಶ್ರೀ ಹರಿಯ ಕೂಡ ಇಪ್ಪಗೆ
ತಲೆಬಾಗಿ ರಾಮನ ಕಂಡನೆನಿಸುವುದೇನೊ
ಛಲದಿಂದ ಖಳಜಾತಿಯ ಕೊಲಿಸುವ ಹರಿಪ್ರಿಯ
ಹುಲುವಾಲಿಯೊಬ್ಬನ್ನ ಕೊಲ್ಲಿಸಿದ ಬಗೆಯೇನೊ
ಜಲಜಜಾಂಡ ಕರತಲದಲ್ಲಿ ಕಾಂಬ ಪ್ರಾಣ
ಚಲುವ ಸೀತೆಯಗೋಸುಗ ಹುಡುಕಲು ಪೋದದ್ದೇನೊ
ಸಲೆ ಆಲೋಚನೆಯಿಂದ ಎಲ್ಲೆಲ್ಲಿದ್ದ ದ್ರವ್ಯ ನೋಳ್ಪನೆ
ಕುಳಿತು ಕಪಿಗಳ ಕೂಡಾಲೋಚನೆ ಮಾಡಿದ್ದೇನೊ
ಪಳಮಾತ್ರ ಕಾಲಭೀತಿ ಇಲ್ಲದ ಪ್ರತಾಪನೆ
ಸುಳಿದೆ ಬಿಡಾಲನಾಗಿ ಲಂಕೆಯೊಳು ಸೋಜಿಗವೇನೊ
ಮಲೆತ ಮಲ್ಲರ ವೈರಿ ವಿಜಯ ವಿಠ್ಠಲನಂಘ್ರಿ
ಜಲಜಾರ್ಚನೆ ಮಾಳ್ಪ ಸೂತ್ರ ನಾಮಕ ವಾಯು ||1||
ಮಟ್ಟತಾಳ
ಹರಿಸಿರಿಗೆ ನಿತ್ಯ ಅವಿಯೋಗ ಚಿಂತಿ ಪನೆ
ವರ ಕೋಡಗನಾಗಿ ಮುದ್ರೆ ಇತ್ತದ್ದೇನೊ
ಉರಗನೊಡನೆ ಮೇರುಮಗನ ಕಿತ್ತಿದ ಧೀರ
ತರುಜಾತಿಗಳ ಕಿತ್ತು ಬಿಸುಟಿದ್ದೇನೊ
ಕರಣಾಭಿಮಾನಿಗಳ ಜಯಸಿದ ಜಗಜ್ಜೀವ
ನೊರಜು ದಾನವರ ಗೆದ್ದದ್ದು ಮಹಾ ಸೊಬಗೆ
ಸರುವ ಭುವನ ನಿನ್ನ ವಶವಾಗಿ ಇರಲು
ಪುರುಹೂತನ ವೈರಿಯ ಕೈಗೆ ಸಿಕ್ಕಿದ್ದೇನೊ
ಪರಮಪುರುಷ ರಂಗ ವಿಜಯ ವಿಠ್ಠಲರೇಯನ
ಕರುಣದಿಂದಲಿ ನಮ್ಮನು ಪೊರೆವ ಪ್ರಾಣಾ ||2||
ತ್ರಿವಿಡಿತಾಳ
ಗರಳ ಧರಿಸಿ ಸುರರ ಕಾಯ್ದ ಕರುಣಾನಿಧಿ
ದುರುಳ ರಾಮಣನ ಸಭೆಯೊಳಂಜಿದ್ದೇನೊ
ಸರಸಿಜಜಾಂಡವ ಸಖನಿಂದ ದಹಿಸುವನೆ
ಭರದಿಂದ ಲಂಕೆಯ ದಹನ ಮಾಡಿದ್ದದ್ದೇನೊ
ನಿರುತ ಅಮೃತ ಉಂಡು ಸುಖಿಸುವ ಸಮರ್ಥ
ಪರಿ ಪರಿ ಫಲದಿಂದ ಹಸಿವೆ ನೂಕಿದ್ದೇನೊ
ಧರೆ ಚತುರ್ದಶದಲ್ಲಿ ನೀನೆ ಚೇಷ್ಟಪ್ರದನು ವಾ
ನರ ಬಳಗವನ್ನು ಖ್ಯಾತಿ ಮಾಡಿದ್ದೇನೊ
ನೆರೆದ ಕಟಕವೆಲ್ಲ ಕರತಲದಲಿ ದಾಟಿಪನೆ
ಗಿರಿಗಳ ಹೊತ್ತು ತಂದು ಶರಧಿ ಬಿಗಿದದ್ದೇನೊ
ಹರಿಯ ರೂಪಾನಂತ ಸಂತತ ಧರಿಪನೆ
ಧುರದೊಳು ರಾಮನ ಪೊತ್ತನೆನಿಪದೇನೊ
ಕರದಲ್ಲಿ ಮಹಾಗದೆ ಪಿಡಿದಿಪ್ಪ ಪುರುಷನೆ
ಗಿರಿ ತರುಶಾಖದಿಂದ ರಣವ ಮಾಡಿದ್ದೇನೊ
ಸರುವನಿಯಾಮಕನಾಗಿ ವ್ಯಾಪಾರ ಮಾಡಿಪನೆ
ಕರೆದು ವಿಭೀಷಣನ ಪ್ರಶ್ನೆ ಕೇಳುವುದೇನೊ
ಭರಣ ಮಿನುಗುವ ವಸದಿಂದೊಪ್ಪುವ
ವರ ಕೌಪೀನವ ಹಾಕಿ ಚರಿಸಿದ ಬಗೆ ಏನೋ
ತರಣಿ ವಂಶಜ ರಾಮ ವಿಜಯ ವಿಠ್ಠಲರೇಯನ
ಚರಿತೆಯಂದದಿ ನಿನ್ನ ಚರಿಯ ತೋರಿದ ಹನುಮ ||3||
ಅಟ್ಟತಾಳ
ದ್ವಿತೀಯ ಕೂರ್ಮನಾಗಿ ಜಗವ ಪೊತ್ತ ಶಕ್ತ
ಭೃತ ಸಂಜೀವನಾದ್ರಿ ಭಾರತರವೇನೊ
ಸತತ ಆರಬ್ಧಾಂತಗಾಮಿ ನೀನಾಗಿದ್ದು
ಜಿತಶಕ್ರನ ಪಾಶದೊಳಗೆ ಬಿದ್ದದೇನೊ
ಅತಿಶಯ ಜ್ಞಾನದಲಿಪ್ಪ ಪವನನೆ
ಖತಿಗೊಂಡು ಮಾಯಾ ಸೀತೆಗೆ ಚಿಂತಿಸಿದ್ದೇನೊ
ಅತಿಶಯ ಕೋಟಿ ರಾವಣಿ ಭಂಗ ನೆರೆದು
ಪತಿಯ ಬಾಣದಲಿಂದ ಅವನ ಕೊಲಿಸಿದ್ದೇನೊ
ಶ್ರುತಿತತಿ ವಿನುತ ಶ್ರೀವಿಜಯ ವಿಠ್ಠಲನ್ನ
ಸ್ತುತಿಸಿ ಕೊಳುತ ಹರಿಗೆ ಪ್ರೀತನೆನಿಸಿದ ಪ್ರಾಣ||4||
ಆದಿತಾಳ
ಆ ಮಹಾದೇವಾದ್ಯರಿಗೆ ಪಟ್ಟಕೊಡಿಸಿದವನೆ
ಭೂಮಿಯೊಳಗೆ ವಿಭೀಷಣಗೆ ಪಟ್ಟ ಕೊಡಿಸಿದ್ದು ಘನವೆ
ರೋಮ ರೋಮಕೆ ಕೋಟಿ ಲಿಂಗ ಉದುರಿಸಿದವನೆ
ಆ ಮಹಾ ಕಾಶಿಗೆ ಲಿಂಗ ತರಲು ಪೋದ ಬಗೆ ಏನೊ
ಕಾಮಿಸಿದಲ್ಲಿ ವ್ಯಾಪ್ತನಾಗಿ ಇರುವನೆ ಸು
ತ್ರಾಮ ಸುತನ ರಥದಲ್ಲಿ ನಿಂತದ್ದೇನೊ
ಕೋಮಲಾಂಗನೆ ನಿನ್ನ ವರ್ಣಿಸಲು ಭಾರತಿಗರಿದು
ಈ ಮತ್ರ್ಯಲೋಕದಲ್ಲಿ ಈ ರೂಪವಾದದ್ದೇನೊ
ಸೋಮಾರ್ಕರ ಸೋಲಿಸುವ ಮಾಣಿಕ್ಯ ಮನೆ ಇರಲು
ಧಾಮ ಮಾಡಿದ್ದೇನೊ ಕಿಂಪುರುಷ ಖಂಡದೊಳಗೆ
ಸಾಮ ಗಾಯನಲೋಲ ವಿಜಯ ವಿಠ್ಠಲರೇಯ
ಸ್ವಾಮಿ ಕಾರ್ಯ ಧುರಂಧರ್ಯ ಭಕ್ತ ಸೌಕರ್ಯ||5||
ಜತೆ
ಒಡೆಯನಾಜ್ಞಾವ ತಾಳಿ ಕಾರ್ಯ ಮಾಡಿದ ಗುರುವೆ
ಕಡು ಸಮರ್ಥ ವಿಜಯ ವಿಠ್ಠಲನ ನಿಜವಾಸ ||6||
dhruvatALa
jalajasaMBavana paTTakkEruva guruve
iLeyoLu kOti kAya dharisi puTTiddEno
balu praLayadalli jAgratanAgidda maruta
kuliSa dharaniMdanoMdu mUrCegoMDiddEno
kelakAla samasta Sruti nirNayadaMte
jalajAptanalli niMdu Odu OdiddEno
balavaMtanAgi surarakaiya kappava koMbuvane
olidu sugrIvaMge dUtanAdaddEno
gaLige biDade SrI hariya kUDa ippage
talebAgi rAmana kaMDanenisuvudEno
CaladiMda KaLajAtiya kolisuva haripriya
huluvAliyobbanna kollisida bageyEno
jalajajAMDa karataladalli kAMba prANa
caluva sIteyagOsuga huDukalu pOdaddEno
sale AlOcaneyiMda ellellidda dravya nOLpane
kuLitu kapigaLa kUDAlOcane mADiddEno
paLamAtra kAlaBIti illada pratApane
suLide biDAlanAgi laMkeyoLu sOjigavEno
maleta mallara vairi vijaya viThThalanaMGri
jalajArcane mALpa sUtra nAmaka vAyu ||1||
maTTatALa
harisirige nitya aviyOga ciMti pane
vara kODaganAgi mudre ittaddEno
uraganoDane mErumagana kittida dhIra
tarujAtigaLa kittu bisuTiddEno
karaNABimAnigaLa jayasida jagajjIva
noraju dAnavara geddaddu mahA sobage
saruva Buvana ninna vaSavAgi iralu
puruhUtana vairiya kaige sikkiddEno
paramapuruSha raMga vijaya viThThalarEyana
karuNadiMdali nammanu poreva prANA ||2||
triviDitALa
garaLa dharisi surara kAyda karuNAnidhi
duruLa rAmaNana saBeyoLaMjiddEno
sarasijajAMDava saKaniMda dahisuvane
BaradiMda laMkeya dahana mADiddaddEno
niruta amRuta uMDu suKisuva samartha
pari pari PaladiMda hasive nUkiddEno
dhare caturdaSadalli nIne cEShTapradanu vA
nara baLagavannu KyAti mADiddEno
nereda kaTakavella karataladali dATipane
girigaLa hottu taMdu Saradhi bigidaddEno
hariya rUpAnaMta saMtata dharipane
dhuradoLu rAmana pottanenipadEno
karadalli mahAgade piDidippa puruShane
giri taruSAKadiMda raNava mADiddEno
saruvaniyAmakanAgi vyApAra mADipane
karedu viBIShaNana praSne kELuvudEno
BaraNa minuguva vasadiMdoppuva
vara kaupInava hAki carisida bage EnO
taraNi vaMSaja rAma vijaya viThThalarEyana
cariteyaMdadi ninna cariya tOrida hanuma ||3||
aTTatALa
dvitIya kUrmanAgi jagava potta Sakta
BRuta saMjIvanAdri BArataravEno
satata ArabdhAMtagAmi nInAgiddu
jitaSakrana pASadoLage biddadEno
atiSaya j~jAnadalippa pavanane
KatigoMDu mAyA sItege ciMtisiddEno
atiSaya kOTi rAvaNi BaMga neredu
patiya bANadaliMda avana kolisiddEno
Srutitati vinuta SrIvijaya viThThalanna
stutisi koLuta harige prItanenisida prANa||4||
AditALa
A mahAdEvAdyarige paTTakoDisidavane
BUmiyoLage viBIShaNage paTTa koDisiddu Ganave
rOma rOmake kOTi liMga udurisidavane
A mahA kASige liMga taralu pOda bage Eno
kAmisidalli vyAptanAgi iruvane su
trAma sutana rathadalli niMtaddEno
kOmalAMgane ninna varNisalu BAratigaridu
I matryalOkadalli I rUpavAdaddEno
sOmArkara sOlisuva mANikya mane iralu
dhAma mADiddEno kiMpuruSha KaMDadoLage
sAma gAyanalOla vijaya viThThalarEya
svAmi kArya dhuraMdharya Bakta saukarya||5||
jate
oDeyanAj~jAva tALi kArya mADida guruve
kaDu samartha vijaya viThThalana nijavAsa ||6||