guru jagannatha dasaru · MADHWA · raghavendra · raghavendra vijaya

Raghavendra Vijaya – SANDHI 07

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯ ಜಯತು ಗುರುರಾಯ ಶುಭಕರ
ಜಯ ಜಯತು ಕವಿಗೇಯ ಸುಂದರ
ಜಯ ಜಯತು ಘನ ಬೋಧ ಗುಣಗಣಪೂರ್ಣ ಗಂಭೀರ
ಜಯ ಜಯತು ಭಕ್ತಲಿಪಾಲಕ
ಜಯ ಜಯತು ಭಕ್ತೇಷ್ಟದಾಯಕ
ಜಯ ಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ ||೧||

ಆದಿಯಲಿ ಪ್ರಹ್ಲಾದ ನಾಮಕ-
ನಾದ ತ್ರೇತಾಯುಗದಿ ಲಕ್ಷ್ಮಣ-
ನಾದ ದ್ವಾಪರಯುಗದಿ ಬಲ ಬಾಹ್ಲೀಕನಾಮದಲಿ
ಯಾದವೇಶನ ಭಜಿಸಿ ಕಲಿಯುಗ
ಪಾದದೊಳು ತಾ ಎರಡು ಜನ್ಮವ
ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ ||೨||

ಸಾರ ಸುಂದರಕಾಯ ಸುಗಣೋ-
ದಾರ ಶುಭತಮ ಸ್ವೀಯ ಮಹಿಮಾ-
ಪಾರಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ
ಧಾರುಣೀಸುರ ಕುಮುದಚಂದಿರ
ಘೋರಪಾತಕ ತಿಮಿರದಿನಕರ
ಧೀರಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು ||೩||

ಸೂರಿಜನಹೃದಯಾಬ್ಜಮಂದಿರ
ಹೀರ-ಹಾರ-ವಿಭೂಷಿತಾಂಗನು
ಚಾರು-ರತ್ನ-ಕಿರೀಟಕುಂಡಲ-ರತ್ನಮಾಲೆಗಳ
ವಾರೀಜಾಕ್ಷೀ ಮಣಿಯು ತುಲಸೀ
ಸಾರಮಾಲೆಯ ಧರಿಸಿ ಯತಿವರ
ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ ||೪||

ಚಾರುತರ ಕೌಪೀನ ಪಾದುಕ-
ಧಾರಿ ದಂಡ ಕಮಂಡು ಲಾಂಚಿತ
ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು
ಸಾರಿದವರಘ ಹರಿದು ಸುಖಫಲ
ಸೂರಿ ಕೊಡುತಲಿ ಸರ್ವಕಾಲದಿ
ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ ||೫||

ಮತಿಮತಾಂವರ ರಾಘವೇಂದ್ರನು
ಮಿತಿಯುಯಿಲ್ಲದೆ ಮಹಿಮೆ ಜನರಿಗೆ
ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ
ಸತಿಸುತಾದಿ ಸುಭಾಗ್ಯ ಸಂಪದ
ಮತಿಯು ಜ್ಞಾನ ಸುಭಕ್ತಿ ದಿನದಿನ
ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ ||೬||

ಸುರರ ನದಿಯಂದದಲಿ ಪಾಪವ
ತರಿವ ನರ್ಕನ ತೆರದಿ ಕತ್ತಲೆ
ಶರಧಿತನಯನ ತೆರದಿ ತಾಪವ ಕಳೆದು ಸುಖವೀವ
ಸರಿಯುಗಾಣೆನು ಇವರ ಚರ್ಯಕೆ
ಹರಿಯು ತಾನೇ ಸಿರಿಯ ಸಹಿತದಿ
ಇರುವ ತಾನಾನಂದ ಮುನಿವರ ಸಕಲಸುರಸಹಿತ ||೭||

ಇನಿತೆ ಮೊದಲಾದಮಿತ ಗುಣಗಣ-
ವನಧಿಯೆನಿಸುತಲವನಿತಳದಲಿ
ಅನುಪಮೋಪವ ತಾನೆ ತನ್ನನು ನಂಬಿ ಭಜಿಪರಿಗೆ
ಕನಸಿಲಾದರು ಶ್ರಮವ ತೋರದೆ
ಮನದ ಬಯಕೆಯ ಸಲಿಸಿ ಕಾಯುವ
ತನುಸುಛಾಯದ ತೆರದಿ ತಿರುಗುವ ತನ್ನ ಜನರೊಡನೆ ||೮||

ಏನು ಕರುಣೀಯೊ ಏನು ದಾತನೊ
ಏನು ಮಹಿಮೆಯೊ ಏನು ಶಕುತಿಯೊ
ಏನು ಇವರಲಿ ಹರಿಯ ಕರುಣವೊ ಏನು ತಪಬಲವೋ
ಏನು ಕೀರ್ತಿಯೊ ಜಗದಿ ಮೆರೆವದು
ಏನು ಪುಣ್ಯದ ಫಲವೊ ಇವರನ
ಏನು ವರ್ಣಿಪೆ ಇವರ ಚರಿಯವನಾವ ಬಲ್ಲವನು ||೯||

ಧರಣಿ ತಳದಲಿ ಮೆರೆವ ಗುರುವರ
ಚರಿಯ ತಿಳಿಯಲು ಸುರರೆ ಯೋಗ್ಯರು
ಅರಿಯರೆಂದಿಗು ನರರು ದುರುಳರು ಪರಮಮೋಹಿತರೂ
ಮರುಳುಮಯ ಭವದಾಶ ಪಾಶದ
ಉರುಳು ಗಣ್ಣಿಗೆ ಶಿಲ್ಕಿ ಹಗಲೂ
ಇರುಳುಯನದಲೆ ಏಕವಾಗೀ ತೊಳಲಿ ಬಳಲುವರು ||೧೦||

ಕರುಣವಾರಿಧಿ ಶರಣಪಾಲಕ
ತರುನದಿನಕರನೆನಿಪ ಗುರುವರ
ಚರಣ ಸೇವಕಜನರಪಾಲಿಪ ಜನನಿ ತೆರದಂತೆ
ಸುರರತರುವರದಂತೆ ಸಂತತ
ಪೊರೆದು ತನ್ನಯ ಭಕುತ ಜನರನು
ಧರಣಿಮಂಡದೊಳಗೆ ರಾಜಿಪ ನತಿಪಜನಭೂಪಾ ||೧೧||

ಎನು ಚೋದ್ಯ್ವೊ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೆ ನಿಂತಿಹನೋ
ಏನು ಕರುಣಾನಿಧಿಯೊ ಈತನು
ಏನು ಭಕುರೈಗಭಯದಾಯಕ
ಏನು ಈತನ ಮಹಿಮೆ ಲೋಕಕಗಮ್ಯವೆನಿಸಿಹದೋ ||೧೨||

ವಿಧಿಯು ಬರದಿಹ ಲಿಪಿಯ ಕಾರ್ಯವ
ಬದಲಿಮಾಡುವ ಶಕುತಿ ನಿನಗೇ
ಪದುಮನಾಭನು ದಯದಿ ತಾನೇಯಿತ್ತ ಕಾರಣದಿ
ಸದಯ ನಿನ್ನಯ ಪಾದಪದುಮವ
ಹೃದಯ ಮದ್ಯದಿ ಭಜಿಪ ಶಕುತಿಯ
ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು ||೧೩||

ಘಟನವಾಗದ ಕಾರ್ಯಗಳ ನೀ
ಘಟನಮಾಡುವ ವಿಷಯದಲಿ ನೀ
ಧಿಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ
ಶಠದಿ ನಿನ್ನನು ಭಜಿಸದಿಪ್ಪರ
ಶಠವ ಕಳೆದತಿಹಿತದಿ ನಿನ್ನಯ
ಭಠರ ಕೋತಿಗೆ ಘಟನಮಾಡುವದೇನು ಅಚ್ಚರವೋ ||೧೪||

ನಿನ್ನ ಕರುಣಕೆ ಎಣಿಯಗಾಣೆನೊ
ನಿನ್ನ ಶಕುತಿಗೆ ನಮನಮಾಡುವೆ
ನಿನ್ನ ಕರುಣಕಟಾಕ್ಷದಿಂದಲಿ ನೋಡೊ ಗುರುರಾಯ
ನಿನ್ನ ಪದಯುಗದಲ್ಲಿ ಸರ್ವದ
ಎನ್ನ ಮನವನು ನಿಲಿಸಿ ಪಾಲಿಸೊ
ನಿನ್ನ ಜನ್ಯನು ನಾನು ಎನ್ನಯ ಜನಕ ನೀನಲ್ಲೆ ||೧೫||

ಹಿಂದೆ ಮಾಡಿದ ನಿನ್ನ ಮಹಿಮೆಗ
ಳೊಂದು ತಿಳಿಯದು ಪೇಳೊ ಶಕುತಿಯು
ಎಂದಿಗಾದರು ಪುಟ್ಟಲಾರದು ಮನುಜರಾಧಮಗೇ
ಇಂದು ಮಹಿಮವ ತೋರಿ ಭಕುತರ
ವೃಂದ ಮೋದದಿ ಪಾಡಿಕುಣಿವದು
ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು ||೧೬||

ವ್ಯಾಸಮುನಿ ಗುರುವರ್ಯ ಎನ್ನಯ
ಕ್ಲೇಶ ನಾಶನಮಡಿ ಕರುನದಿ
ವಾಸುದೇವನ ಹೃದಯಸದನದಿ ತೋರಿ ಪೊರೆಯೆಂದೇ
ವಾಸವಾಸರದಲ್ಲಿ ತವ ಪದ
ಆಶೆಯಿಂದಲಿ ಸೇವೆಮಾಳ್ಪೆನು
ದಾಸನೆನಿಸೀ ಭವದ ಶ್ರಮಪರಿಹರಿಸೊ ಗುರುರಾಯ ||೧೭||

ತತ್ವಸಾರವ ತಿಳಿಸು ಭವದಿ ವಿ-
ರಕ್ತ ಮತಿಯನುಯಿತ್ತು ತ್ವತ್ವದ
ಸಕ್ತಚಿತ್ತನಮಾಡಿ ಭಗವದ್ಭಕ್ತನೆಂದೆನಿಸು
ಕೆತ್ತವೋಲ್ ಮನ್ಮನದಿಯಿರುತಿಹ
ಕತ್ತಲೆಯ ಪರಿಹರಿಸಿ ದಿನದಿನ
ಉತ್ತಮೋತ್ತಮ ಜ್ಞಾನಭಕುತಿಯಿನಿತ್ತು ಪೊರೆಯೆನ್ನ ||೧೮||

ಪ್ರಣತಜನಮಂದಾರ ಕಾಮದ
ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ
ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ
ಮಣಿಸು ಮನವನು ನಿನ್ನ ಪದದಲಿ
ಗುಣಿಸಿ ನಿನ್ನಯ ರೂಪ ನೋಡೀ ದಣಿಸು ನಿನ್ನವರೊಳಗೆ ಸಂತತ ಎಣಿಸೊ ಕರುಣಾಳೋ ||೧೯||

ನಿನ್ನ ಕಥೆಗಲ ಶ್ರವಣಮಾಡಿಸೊ
ನಿನ್ನ ಗುಣಕೀರ್ಥನೆಯ ಮಾಡಿಸೊ
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ
ನಿನ್ನ ಅರ್ಚನೆಗೈಸೊ ಗುರುವರ
ನಿನ್ನ ವಂದನೆಗೈಸೊ ದಾಸ್ಯವ
ನಿನ್ನ ಗೆಳೆತನ ನೀಡೊ ಯತಿವರ ಎನ್ನನರ್ಪಿಸುವೇ ||೨೦||

ಅಮಿತ ಮಹಿಮನೆ ನಿನ್ನ ಪಾದಕೆ
ನಮಿಪೆ ಮತ್ಕೃತದೋಶವೆಣಿಸದೆ
ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ
ಅಮರರರಿಯರಗಮ್ಯಮಹಿಮವ
ವಿಮಲಗುಣಮಯ ಪ್ರಬಲತಮ ನೀ-
ನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ ||೨೧||

ಶಿರದಿ ಸಮನವ ಮಾಡಿ ನಿನ್ನನು
ಕರದ ಸಂಪುಟಮಾಡಿ ವಿನಯದಿ
ಮರೆಯದಲೆ ನಾ ಬೇಡಿಕೊಂಬೆನೊ ಶರಣಪರಿಪಾಲ
ಪರಮಕರುಣಿಯೆ ದ್ವಿಜಗೆ ಬಂದಿಹ
ಮರಣ ಬಿಡಿಸೀ ಸುಖವ ನೀಡಿದೆ
ಅರಿಯಲೆಂದಿಗು ಸಾಧ್ಯವಲ್ಲವೊ ನಿನ್ನ ಮಹಮಹಿಮೆ ||೨೨||

ಸಕಲಗುಣಗಣಪೂರ್ಣ ಭಕುತಗೆ
ಅಖಿಳಕಾಮಿತದಾತ ಸುಖಮಯ
ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ
ಲಕುಮಿರಮಣನ ಪ್ರೀತಿಪಾತ್ರನೆ
ಭಕುತಕೈರವಸ್ತೋಮ ಚಂದಿರ
ಮುಕುತಿದಾಯಕ ಮೌನಿಕುಲಮಣಿ ನಮಿಮೆ ಸಲಹೆನ್ನಾ ||೨೩||

ಸ್ವಸ್ತಿ ಶ್ರೀ ಗುರುರಾಘವೇಂದ್ರಗೆ
ಸ್ವಸ್ತಿ ಗುಣಗನಸಾಂದ್ರಮೂರ್ತಿಗೆ
ಸ್ವಸ್ತಿ ಶ್ರೀಯತಿನಾಥ ಲೋಕದಿ ಖ್ಯಾತ ಮಮನಾಥ
ಸ್ವಸ್ತಿ ಶ್ರೆ ಗುರುಸಾರ್ವಭೌಮಗೆ
ಸ್ವಸ್ತಿ ಶ್ರೀ ಸರ್ವಜ್ಞತಮಗೇ
ಸ್ವಸ್ತಿ ಶ್ರೀ ಸುರಧೇನು ಸುರತರು ನಮಿಪ ಭಕುತರಿಗೆ ||೨೪||

ಖ್ಯಾತನಾದನು ಸಕಲಲೋಕಕ-
ನಾಥಪಾಲಕನೆಂಬೊ ಬಿರುದನು
ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ
ಈತನೇ ಮಹದಾತ ಜಗದೊಳು
ಖ್ಯಾತ ಮಹಿಮನು ಶರಣವತ್ಸಲ
ದಾತ ಗುರುಜಗನ್ನಾಥವಿಠಲನ ಸೇವಕಾಗ್ರಣಿಯೂ ||೨೫||

One thought on “Raghavendra Vijaya – SANDHI 07

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s