dasara padagalu · MADHWA · Rudra · siva

Janapriya Dasara padagalu on Rudra devaru

ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕಧನುಧರ ಗಂಗಾಶಿರ ಗಜಚರ್ಮಾಂಬರಧರ || ಅ.ಪ ||

ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವವ ನೀನೆ
ಅಂದು ಅಮೃತಘಟದಿಂದುದಯಿಸಿದ ವಿಷತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ಪಾದವ ಚೆಂದದಿ ಪೊಗಳುವ ನೀನೆ || ೧ ||

ಬಾಲ ಮಾರ್ಕಂಡನ ಕಾಲನು ಎಳೆವಾಗ ಪಾಲಿಸಿದಾತನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ಗಿಗಂಬರ ನೀನೆ
ಕಾಲಕೂಟ ವಿಷವ ಮೆದ್ದ ಶೂಲಪಾಣಿಯು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ || ೨ ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರದಿ ವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩ ||

chandrachuda sivashankara


ಶಿವನೇ ನಾ ನಿನ್ನ ಸೇವಕನಯ್ಯಾ
ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ || ಪ ||
ಭವಮೋಚಕ ಭಾಗವತಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ ||

ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ
ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ ||

ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ
ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ
ಕೃತ್ತಿವಾಸ ಎನ್ನತ್ಯಪರಾಧಗ
ಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ ||

ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ
ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ
ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ
ಯಂಗ ಡಮರು ಶೂಲಂಗಳ ಪಿಡಿದಿಹ || ೩ ||

ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ
ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ
ಪಂಚಶರಾರಿ ವಿರಿಂಚಿಕುವರ ನಿ
ಷ್ಕಿಂಚನರೊಡೆಯನ ಮಂಚಪದಾರ್ಹನೆ || ೪ ||

ಸ್ಫಟಿಕಾಭ ಕಪಾಲಿ ಕಾಮಿತಫಲದಾ ಫಲ್ಗುಣಸಖ ಶ್ರೀದ
ವಿಠಲ ವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ || ೫ ||

Shivane naa ninna sevakanayyaa


ಕೈಲಾಸವಾಸ ಗೌರೀಶ ಈಶಾ || ಪ ||
ತೈಲಧಾರೆಯಂತೆ ಮನಸು ಕೊಡು ಹರಿಯಲಿ || ಅ.ಪ ||

ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೇ
ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಲಿ ವಿಷ್ಣು ಭಕುತಿಯ ಕೊಡು ಶಂಭೋ || ೧ ||

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ
ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ
ಮನಸೋ ಈ ಶಿರವ ಸಜ್ಜನರ ಸಿರಿ ಚರಣದಲಿ || ೨ ||

ಭಾಗೀರಥೀಧರನೇ ಭಯವ ಪರಿಹರಿಸಯ್ಯ ಲೇ
ಸಾಗಿ ಒಲಿದು ಸಂತತ ಶರ್ವ ದೇವಾ
ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ || ೩ ||

Kailaasa vaasa goureesha eesha


ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ || ೨ ||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ || ೩ ||

Dhavala gangeya gangadhara


ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ || ಪ ||

ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ
ಜಟಾಕುಂಡಲಧಾರಿ ಕಾಣಮ್ಮ || ಅ.ಪ ||

ಕೈಲಾಸಗಿರಿಯ ದೊರೆಯಿವನಮ್ಮ – ಅದು ಅಲ್ಲದೆ ಕೇಳೆ
ಬೈಲು ಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದು
ಕೇಳೆ ಮಹಿಯೊಳು ಜನಪೊಗಳುವರಮ್ಮ – ಇದು ನೈಜವಮ್ಮ
ನಾಲಿಗೆ ಸಾಸಿರ ಫಣಿಭೂಷಣನಮ್ಮ
ರಮೆಯರಸಗೆ ಇವ ಮೊಮ್ಮಗನಮ್ಮ || ೧ ||

ಬಾಲೆ ದಾಕ್ಷಾಯಣಿ ಪತಿ ಇವನಮ್ಮ – ಮಾನವ ಯಾಗದಲಿ
ಬ್ಹಾಳ ಕೃತ್ಯಗಳನು ನಡೆಸಿದನಮ್ಮ – ಸಾಗರದಲಿ ಹುಟ್ಟಿದ
ಕಾಳಕೂಟವ ಭಕ್ಷಿಸಿದನಮ್ಮ – ರಾಮನ ದಯವಮ್ಮ
ಮೇಲೆ ಉಳಿಯಲು ಶೇಷಗರಳವು
ನೀಲಕಂಠನೆಂದೆನಿಸಿದನಮ್ಮ || ೨ ||

ಹರನೊಂದಿಗೆ ವೈಕುಂಠಕೆ ಬರಲು – ತಾತಗೆ ವಂದಿಸುತ
ತರಣೀ ರೂಪವ ನೋಡೇನೆನೆಲು – ಹರಿ ತಾ ನಸುನಗುತ
ಕರೆದು ಸೈರಿಸಲಾರೆ ನೀ ಎನಲು – ಹಠದಿ ಕುಳ್ಳಿರಲು
ಕರುಣಿಗಳರಸನು ಹರನ ಮೊಗದ ನೋಡಿ
ಅರುಣೋದಯಕೆ ಬಾರೆಂದು ಕಳುಹಿದ || ೩ ||

ಅರುಣೋದಯಕೆ ಗಂಗಾಧರ ಬರಲು – ಹದಿನಾರು ವರುಷದ
ತರುಣೀ ರೂಪದಿ ಹರಿ ಮನದೊಳಗಿರಲು – ಚರಣನಖಾಗ್ರದಿ
ಧರಣೀ ಬರೆಯುತ್ತ ನಿಂತಿರಲು – ಸೆರಗ ಪಿಡಿಯೆ ಬರಲು
ಕರದಿ ಶಂಖ ಗದೆ ಚಕ್ರವ ತೋರಲು
ಹರನು ನಾಚಿ ತಲೆ ತಗ್ಗಿಸಿ ನಿಂತ || ೪ ||

ಮಂಗಳಾಂಗನೆ ಮಾರಜನಕ – ನಾ ಮಾಡಿದ ತಪ್ಪ
ಹಿಂಗದೆ ಕ್ಷಮಿಸೊ ಯದುಕುಲ ತಿಲಕ – ವಕ್ಷದಲ್ಲೊಪ್ಪುವ ನಿ
ನ್ನಂಗನೆ ಅರಿಯಳೊ ನಖಮಹಿಮಾಂಕ – ಹೀಗೆನುತಲಿ ತವಕ
ರಂಗವಿಠಲನ ಪದಂಗಳ ಹಿಡಿದು ಸಾ
ಷ್ಟಾಂಗವೆರಗಿ ಕೈಲಾಸಕೆ ನಡೆದ || ೫ ||

Vrushabanerida vishadharanyare


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ ||ಪ||

ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ ||ಅಪ||

ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋ|| ೧||

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ ||೨||

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ||೩||

sambo svayambu sambava


ನಮಃ ಪಾರ್ವತೀ ಪತಿನುತ ಜನಪರ ನಮೋ ವಿರೂಪಾಕ್ಷ || ಪ ||

ರಮಾ ರಮಣಲಿ ಅಮಲ ಭಕುತಿಕೊಡು ನಮೋ ವಿಶಾಲಾಕ್ಷ ||ಅ.ಪ. ||

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ |
ಫಾಲ ನೇತ್ರ ಕಪಾಲ ರುಂಡ ಮಣಿ ಮಾಲಾವೃತ ವಕ್ಷ |
ಶೀಲ ರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ || ೧ ||

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ |
ದಾಸರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ |
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ |
ಶ್ರಿಶನಲ್ಲಿ ಕೀಲಿಸುಮನವ ಗಿರಿಜೇಶ ಮಹಾದೇವ || ೨ ||

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ |
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ |
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ |
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ || ೩ ||

namah parvati patinuta janapara


 

2 thoughts on “Janapriya Dasara padagalu on Rudra devaru

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s