dasara padagalu · hari · MADHWA · purandara dasaru

hariyemba namamrutada

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ         ।।ಪ।।

ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ          ।।ಅ.ಪ।।

ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ
ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ
ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ            ।।೧।।

ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ
ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ
ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ                  ।।೨।।

ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ
ಹಾಡಿನ ಸವಿಯನು ಬಧಿರನು ಕೇಳಿ ಹರುಷಪಡಲು ಬಲ್ಲನೆ
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ರೂಢಿಗೊಡೆಯ ನಮ್ಮ ಪುರಂದರವಿಠಲನ ಮೂಢಜ್ಞಾನಿ ಬಲ್ಲನೆ        ।।೩।।

Hariyemba namamrutada surusiyu parama Baktarigallade ||pa||

Ariyada kadumurka nica janarigella harushavagaballade ||a.pa||

Andige aralele ittare koda kandanagaballude
Handige sakkare tuppa tinisalu gajendranagaballude
Candirana purna kaleyanu toralu andha nodaballane
Indire arasana namada mahimeya mandaj~jani ballane ||1||

Uragakke kshiravanereyalu adara vishavu hogaballude
Tvareyimnda niliya karadali toleyalu karidu hogaballude
Paripari bangaravittare dasiyu arasiyagaballale
Baradinda svanana balava tiddalu saralavagaballude ||2||

Modake mayura kunivante kukkuta nodi kuniyaballude
Hadina saviyanu badhiranu keli harushapadalu ballane
Godeya munde natyavanadalu nodi sukisaballude
Rudhigodeya namma purandaravithalana mudhaj~jani ballane ||3||

MADHWA

innu daya barade

ಇನ್ನೂ ದಯೆ ಬಾರದೆ ದಾಸನ ಮೇಲೆ
ಪನ್ನಂಗಶಯನ ಪಾಲ್ಗಡಲೊಡೆಯನೆ ರಂಗ                     ।।ಪ।।

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ಅಳಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿಯೆಂದು ನಂಬಿದ ದಾಸನ ಮೇಲೆ                    ।।೧।।

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
ಪಾಮರನಾಗಿದ್ದ ಪಾತಕನು
ಶ್ರೀಮನೋಹರನೆ ಚಿತ್ತಜ ಜನಕನೆ
ನಾಮಮುದ್ರಿಕೆಯಿಂದ ನಂಬಿದ ದಾಸನ ಮೇಲೆ                 ।।೨।।

ಮಾನಸ ವಾಚ ಕಾಯದಿ ಮಾಳ್ಪ ಕರ್ಮವು
ದಾನವಾಂತಕ ನಿನ್ನಾಧೀನವಲ್ಲವೆ
ಏನು ಮಾಡಿದರೇನು ಪ್ರಾಣ ನಿನ್ನದು ದೇವ
ಶ್ರೀನಾಥ ಪುರಂದರವಿಠಲ ದಾಸನ ಮೇಲೆ                        ।।೩।।

Innu daye barade dasana mele
Pannangasayana palgadalodeyane ranga ||pa||

Nana desagalalli nana kalagalalli
Nana yonigalalli alidu putti
Nanu nannadu emba narakadolage biddu
Nine gatiyendu nambida dasana mele ||1||

Kamadi shadvarga gadhamdhakaradi
Pamaranagidda patakanu
Srimanoharane cittaja janakane
Namamudrikeyimda nambida dasana mele ||2||

Manasa vaca kayadi malpa karmavu
Danavantaka ninnadhinavallave
Enu madidarenu prana ninnadu deva
Srinatha purandaravithala dasana mele ||3||

dasara padagalu · MADHWA · purandara dasaru

baiyiro baiyiro

ಬೈಯಿರೋ ಬೈಯಿರೋ
ಮನಮುಟ್ಟಿ ಬೈಯಿರೋ                       ।।ಪ।।

ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ       ।।ಅ.ಪ।।

ಅವರು ಇವರು ಬೈವರೆಂಬೊ
ಹೀನಬುದ್ಧಿ ನನಗಿಲ್ಲ
ನಾ ಮಾಡಿದಷ್ಟು ಪಾಪವನ್ನು
ಅಳೆದುಹಾಕಿ ಹಂಚಿಕೊಳ್ಳಿರೋ               ।।೧।।

ಇರುವೆ ನೊಣ ಕೊಂದ ಪಾಪ
ಪರನಿಂದೆ ಮಾಡಿದ ಪಾಪ
ಹೊಲೆಯ ಪಾಪ ಕೆಲವು ಉಂಟು
ಅಳೆದು ಹಾಕಿ ಹಂಚಿಕೊಳ್ಳಿರೋ               ।।೨।।

ಅತ್ತೆ ಮಾವನ ಬೈದ ಪಾಪ
ಮತ್ತೆ ಹಿರಿಯರ ಜಾರಿದ ಪಾಪ
ಕರ್ತ ಶ್ರೀ ಪುರಂದರವಿಠಲನ್ನ
ಚಿತ್ತದಲ್ಲಿ ನೆನೆಯದ ಪಾಪ                       ।।೩।।

Baiyiro baiyiro
Manamutti baiyiro ||pa||

Chennagi baidenna dhanyana madiro ||a.pa||

Avaru ivaru baivarembo
Hinabuddhi nanagilla
Na madidashtu papavannu
Aleduhaki hamcikolliro ||1||

Iruve nona konda papa
Paranimde madida papa
Holeya papa kelavu umtu
Aledu haki hancikolliro ||2||

Atte mavana baida papa
Matte hiriyara jarida papa
Karta sri purandaravithalanna
Cittadalli neneyada papa ||3||

dasara padagalu · purandara dasaru

teliso illa mulugiso

ತೇಲಿಸೋ ಇಲ್ಲ ಮುಳುಗಿಸೋ ನಿನ್ನ
ಕಾಲಿಗೆ ಬಿದ್ದೆನೊ ಪರಮ ಕೃಪಾಳೋ                       ।।ಪ।।

ಸತಿಸುತ ಧನದಾಸೆ ಎಂಬಂತೆ ಮೋಹದಿ
ಹಿತದಿಂದ ಅತಿನೊಂದು ಬೆಂಡಾದೆನೊ
ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ –
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ                        ।।೧।।

ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ                       ।।೨।।

ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನೋ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ                       ।।೩।।

Teliso illa mulugiso ninna
Kalige biddeno parama krupalo ||pa||

Satisuta dhanadase embante mohadi
Hitadinda atinondu bendadeno
Gatikoduvara kane matiya paliso lakshmi –
Pati ninna caranada smaraneyittenage ||1||

Jare roga daridrya kasmalaventemba
Saradhiyolage biddu mulugideno
Sthiravalla dehavu nerenambide ninna
Karunabayavittu paliso hariye ||2||

Doshavullava nanu basheyullava ninu
Mosa hodeno Baktirasava bittu
Seshasayana sri purandaravithalane
Dasara sangavittu paliso hariye ||3||

dasara padagalu · purandara dasaru

Ivana hididukondu hogelo

ಇವನ ಹಿಡಿದುಕೊಂಡು ಹೊಗೆಲೋ ಜೋಗಿ                    ।।ಪ।।

ಇವ ನಮ್ಮ ಮಾತ ಕೇಳದೆ ಪುಂಡನಾದ                       ।।ಅ.ಪ।।

ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ                   ।।೧।।

ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ                                  ।।೨।।

ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ                    ।।೩।।

Ivana hididukondu hogelo jogi ||pa||

Iva namma mata kelade pundanada ||a.pa||

Adutaduta hogi nirolu mulugida
Bedavendare betta bennalli hotta
Dadeya mele ta dharini negahida
Hidiya hodare baya teredu anjisida ||1||

Hullali viprana kanna tivida buddhi
Illemdare kaili kodaliya pidida
Billu hididu rakshasaranu savarida
Ballida mavana Siravannu tarida ||2||

Battale kudureya hattabedendare
Hattidano iva caladimda
Baktavatsala siri purandaravithala
Ettaladaru komdu hogelo jogi ||3||

dasara padagalu · hari · MADHWA · purandara dasaru

dharanige doreyendu

ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮಲೋಭಿ ಎಂಬುದರಿಯೆ ಶ್ರೀ ಹರಿಯೆ                   ।।ಪ॥

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ                               ।।೧।।

ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡು ಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ                   ।।೨।।

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜಜನಕ ಶ್ರೀ ಪುರಂದರವಿಠಲ                               ।।೩।।

Dharanige doreyendu nambide intha
Paramalobi embudariye sri hariye ||pa||

Kadi beduvarige kodalarade anji
Odi nirolu serikomde bega
Hediya teradali moreya torade
Odi aranyadi mrugagala seride ||1||

Badavara binnaha lalisade halla
Kadu kopadali teredanjiside
Tadeyade bikshukanadare bidarendu
Kodaliya pididu kodaga hinda kayde ||2||

Uttamanendare matte coranade
Battale ninte tejiyaneride
Ettahodaru bide matte ninnanu deva
Chittajajanaka sri purandaravithala ||3||

dasara padagalu · MADHWA · purandara dasaru

lolalotte ella

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ                             ।।ಪ॥

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ
ಕ್ಷೋಣಿಶನೆಂಬುದು ಲೊಳಲೊಟ್ಟೆ                             ।।೧।।

ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ
ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಳೂ ಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ                       ।।೨।।

ಕಂಟಕರೆಂಬೋರು ಲೊಳಲೊಟ್ಟೆ ನಿನ್ನ
ನಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲ
ಬಂಟನಾಗದವ ಲೊಳಲೊಟ್ಟೆ                                  ।।೩।।

Lolalotte ella lolalotte ||pa||

Ane kudure onte lolalotte bahu
Sene bandaravu lolalotte
Maniniyara sanga lolalotte dodda
Kshonisanembudu lolalotte ||1||

Muttu manikya lolalotte , cinna
Catra camara dhvaja lolalotte
Suttagalu kote lolalotte
Matte uttama prabutva lolalotte ||2||

Kantakaremboru lolalotte ninna
Nantaru ishtaru lolalotte
Untada gunanidhi purandaravithala
Bantanagadava lolalotte ||3||`

dasara padagalu · MADHWA · purandara dasaru

intha hennina nanelli

ಇಂಥಾ ಹೆಣ್ಣಿನ ನಾನೆಲ್ಲಿ ಕಾಣೆನು ಹೊಂತಕಾರಿ ಕಾಣಿರೊ           ।।ಪ॥

ಸಂತತ ಸುರರಿಗೆ ಪೀಯೂಷ ಉಣಿಸಿದ
ಪಂಕ್ತಿಯೊಳಗೆ ಪರವಂಚನೆ ಮಾಡಿದ                                     ।।ಅ.ಪ॥

ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚಂದದಿ ಕಡೆದು ಅಮೃತವ ತೆಗೆದು
ಇಂದುಮುಖಿ ನೀ ಬಡಿಸೆಂದು ಕೊಟ್ಟರೆ
ದಂಧನಗಳ ಮಾಡಿ ದೈತ್ಯರ ವಂಚಿಸಿದ                                  ।।೧।।

ವಿಶ್ವಾಸದಿಂದಲಿ ಅಸುರಗೆ ವರವಿತ್ತು
ತ್ರಿಶೂಲಧರ ಓಡಿ ಬಳಲುತಿರೆ
ನಸುನಗುತಲಿ ಬಂದು ಭಸ್ಮಾಸುರನಿಗೆ
ಭೋಗದಾಸೆಯ ತೋರಿ ಭಸ್ಮವ ಮಾಡಿದ                              ।।೨।।

ವಸುಧೆಯೊಳು ಹೆಣ್ಣು ಒಸಗೆಯಾಗದ ಮುನ್ನ
ಬಸಿರಲಿ ಬ್ರಹ್ಮನ ಪಡೆದವಳಿವಳು
ಕುಸುಮನಾಭ ಶ್ರೀ ಪುರಂದರವಿಠಲ
ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆಯು                                 ।।೩।।

Intha hennina nanelli kanenu homtakari kaniro ||pa||

Santata surarige piyusha unisida
Panktiyolage paravancane madida ||a.pa||

Mandaragiri tandu sindhuvinolagittu
Chandadi kadedu amrutava tegedu
Indumuki ni badisendu kottare
Dandhanagala madi daityara vancisida ||1||

Visvasadindali asurage varavittu
Trisuladhara odi balalutire
Nasunagutali bandu basmasuranige
Bogadaseya tori Basmava madida ||2||

Vasudheyolu hennu osageyagada munna
Basirali brahmana padedavalivalu
Kusumanaba sri purandaravithala
Pesaru pottihalu I posa kannikeyu ||3||

dasara padagalu · MADHWA · purandara dasaru

Rama krushnaru manege

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ              ।।ಪ।।

ಕಾಮಧೇನು ಬಂದಂತಾಯಿತು ವರವ ಬೇಡಿರೆ                    ।।ಅ.ಪ॥

ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ                  ।।೧।।

ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಸುಕುಮಾರ ಸುಂದರವಾದ ಉಡಿಗೆ ಉಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ           ।।೨।।

ಪೊಕ್ಕುಳಲಿ ಅಜನ ಪಡೆದ ದೇವದೇವನು
ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯನವ ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು                 ।।೩।।

Ramakrushnaru manege bandaru bagilu tereyire ||pa||

Kamadhenu bandantayitu varava bedire ||a.pa||

Cendu buguri cinni kolu gajjugavaduta
Dundu mallige mudidu kolalanudi paduta
Hinduvengala muddu mukada sobaga noduta
Bandu madi baleyarodane sarasavaduta ||1||

Makara kumdala nilamuttina bavulidutali
Kankana hara tolabandi todige todutali
Sukumara sundaravada udige udutali
Mukada kamala mugulunageya sukava kodutali ||2||

Pokkulali ajana padeda devadevanu
Cikka amgushtadali gamgeya padedanu
Makkala manikyanava purandaravithalanu
Akkareyindali mukuti koduva ranganathanu ||3||

MADHWA · purandara dasaru · srinivasa

kande kande swamiya

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ                                             ||ಪ||

ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ            ||ಅ.ಪ||

ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ              ||೧||

ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ             ||೨||

ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ           ||೩||

Kande kande svamiya bedikonde ||pa||

Kande tirupati venkatesana karanatmaka sarvabaumana
Kamitarthagaliva devana karunanidhi endenisi merevana ||a.pa||

Kotisurya prakasavenipa kiritavanu mastakadi kandenu
Notakascaryavada nagemukanosalinali tirumaniya kandenu
Satiyillade chatura hastadi samkacakragadabja kandenu
Butakada matalla keliro buridaivara gandanangriya ||1||

Tappukanike kappavanu samastadvipagalindali tarisuva
Uppu ogaragalane marisi ucitadindali hanava galisuva
Ippattu duddige seru tirtha oppadali kraya madi kodisuva
Sarpasayana sarvabaumana appa venkataramananangriya ||2||

Uradi sri deviyala kamdenu unnatada kaustubava kandenu
Garuda kinnaranaradadi gamdharvara edabaladali kandenu
Tarataradi baktarige varagala karedu koduvuda nirata kandenu
Saradhisayanana seshagiriya varada purandaravithalanangriya ||3||