dasara padagalu · kanakadasaru

Aritu nadeyalu beku narakayavettida mele

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ
ಅರಿಯದಿದ್ದರೆ ನರಕವೇ ಪ್ರಾಪ್ತಿ                                              ।।ಪ।।

ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರಾರು ಹೊನ್ನನಿತ್ತರೂ ಬೇಡ ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ                                     ।।೧।।

ಭಕ್ತಿಹೀನರ ಮನೆಯ ಪಟ್ಟ ಸುಪ್ಪತಿಗೆಗಿಂತ
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು
ಮುಕ್ತಿ ಮಾರ್ಗವ ತೋರ್ಪ ಮುರಹರಣ ದಾಸರನು
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ                            ।।೨।।

ಆಶೆಕಾರರ ಮನೆಯ ವಿಳಾಸ ಸುಖಕಿಂತ
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು
ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ
ಮೀಸಲಿನ ಪಾದಭಜನೆ ಕಡುಲೇಸು ಮನವೆ                              ।।೩।।

Aritu nadeyalu beku narakayavettida mele
Ariyadiddare narakave prapti ||pa||

Durjanara maneya payasannakinta
Sajjanara maneya rabbalige lesu
Hejjege saviraru honnanittaru beda balu
Durjanara sanga balu Banga hariye ||1||

Baktihinara maneya patta suppatigeginta
Baktara maneya kadebagila kayuvudu lesu
Mukti margava torpa muraharana dasaranu
Saktiyim sevisuvudu balu saukya hariye ||2||

Asekarara maneya vilasa sukakinta
Asarahitara maneya nirgatika dainya lesu
Busura priya kagineleyadikesavana
Misalina padabajane kadulesu manave ||3||

dasara padagalu · kanakadasaru · MADHWA

Bayi narida mele ekantave

ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತವರಾಸೆಯೆ                         ।।ಪ॥

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ                    ।।೧।।

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೆ                          ।।೨।।

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ?                            ।।೩।।

Bayi narida mele ekantave
Tayi tirida mele tavaraseye ||pa||

Kannu ketta mele kadurupa celvikeye
Bannagundida mele bahumanave
Punyatirida mele paraloka sadhanave
Sunnavillada vilyavadu svadumayave ||1||

Kilubina battalolu huli kalasi una bahude
Caliyurige chandanada lepa hitave
Molebidda henninolu mohakke sogasahude
Belebidda sarakinolu labavunte ||2||

Pathya serada mele nityasukavenabahude
Sattva taggida mele samarthyave
Pruthviyolu kagineleyadikesava ninna
Baktiyillada narage muktiyunte? ||3||

dasara padagalu · kanakadasaru · MADHWA

Aru ballaru hari harara mahimeyanu

ಆರು ಬಲ್ಲರು ಹರಿ ಹರರ ಮಹಿಮೆಯನು
ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ                    ।।ಪ॥

ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀತ
ಗೌರಿಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ                          ।।೧।।

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ
ಗಿಲಕಾಯ್ದನಚ್ಯುತನು ಅನುಗಾಲದಿ
ಬಲಭುಜನು ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು                      ।।೨।।

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು                      ।।೩।।

Aru ballaru hari harara mahimeyanu
Varijodbava surendradigaligalavalla ||pa||

Pauratrayava geluva samayadali tapavamadi
Narayanastravanu padedanita
Gaurimanoharana ganatararcanegaidu
Carutara cakravanu padedana Sauri ||1||

Bali cakravarti Baktige mecci avana ba
Gilakaydanacyutanu anugaladi
Balabujanu banasurana gruhadvaravanu
Balasi kaydanu haranu varava tanittu ||2||

Bogisayananu Agi bogibushananagi
Vagisanagi srushti sthiti layagalimge
Agu karana karya karmadi rupakke
Kagineleyadikesavana mahimeyanu ||3||

dasara padagalu · kanakadasaru · MADHWA

Ava siriyali ninu enna marete

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ?                      ।।ಪ॥

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ                           ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ                                ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ                            ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ                        ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವಾ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ                            ।।೫।।

Ava siriyali ninu enna marete ?
Deva janakiramana pelu ragupatiye ? ||pa||

Surara sereyanu bidisi bandanemba siriye
Kari moreya lalisidenemba siriye ?
Saradhi setuveya kattidenennuva siriye
Sthiravagi helenage helu ragupatiye ||1||

Kadalolage mane madi malagidenemba siriye
Mruda ninna sakanadanemba siriye ?
Bidade draupadi mana kaydanemba siriye
Drudhavagi helenage devakisutane ||2||

Bumiyanu muradiya madidenemba siriye
Kama ninna sutanadanemba siriye
A mahalakumi ninna satiyadalemba siriye
Premadali helenage svami acyutane ||3||

Manujarellaru ninna stutisuvaremba siriye
Hanuma ninna bantanadenemba siriye
Binugudaivagalu ninageneyillavemba siriye
Anumana madade pelo narahariye ||4||

Intu siriyali ninu enna maretare svami
Panthave ninagidu ava nadate
Kantupita kagineleyadikesava ranga
chinteyanu biDisi santOShapaDiso ||5||

 

dasara padagalu · kanakadasaru · MADHWA

Ni mayeyolago ninnolu mayeyo

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ                  ।।ಪ॥

ನೀ ದೇಹದೊಳಗೊ ನಿನ್ನೊಳು ದೇಹವೊ                          ।।ಅ.ಪ॥

ಬಯಲುಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ                     ।।೧।।

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ                     ।।೨।।

ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ                   ।।೩।।

Ni mayeyolago ninnolu mayeyo ||pa||

Ni dehadolago ninnolu dehavo ||a.pa||

Bayalulolage Alayavo alayadolage bayalo
Bayalu alayaveradu nayanadolago
Nayana buddhiya olago buddhi nayanadolago
Nayana buddhigaleradu ninnolago hariye ||1||

Saviyu sakkareyolago sakkareyu saviyolago
Saviyu sakkaregaleradu jihveyolago
Jihve manasina olago manasu jihveya olago
Jihve manasugaleradu ninnolago hariye ||2||

Kusumadali gandhavo gandhadali kusumavo
Kusumagandhagaleradu agranadolago
Asamabava kagineleyadi kesavaraya
Usuralennalavalla ella ninnolago hariye ||3||

 

dasara padagalu · hari · kanakadasaru · MADHWA

Elliruvano ranga emba samsaya beda

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ ||

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ?|| ೧ ||

ಪಾಪಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ
ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ ?|| ೨ ||

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲಿ ಬಂದು
ಕರುಣದಲಿ ಬಂದವನ ಪರಿಹರಿಸೆ ಗಜರಾಜ
ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ?|| ೩ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಹಿ ಹಾ ಕೃಷ್ಣ ಎಂದೊರೆ(*) ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ?|| ೪ ||

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರು ಮನದೊಳಿಹನೆಂಬ ಬಿರುದುಂಟಾಗಿ|| ೫ ||

Elliruvano ranga emba samsaya beda ||pa||

Elli Baktaru kareye alli bandodaguvanu ||a.pa||

Tarala prahlada hari visvamayanendu
Baradodeyalavanapita kopadinda
Sthiravadoli kambadali toru torenalu
Baradinda baraladake vaikuntha neremaneye ||1||

Kurupatiyu draupadiya sireyanu seleyutire
Taruni ha krushna endare keldu
Baradimda akshayambaraviye hastina
Purige dvaravatiyu kugalateye ||2||

Anuhottinolella paripurna visvamaya
Gananeyillada mahamahimanenipa
Gana krupanidhi kagineleyadikesavanu
Nenevara manadolihanemba biruduntaagi ||3||

dasara padagalu · hari · kanakadasaru · MADHWA

Elu narayana elu lakshmiramana

ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಗೊಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ||

ದಾಸರೆಲ್ಲರು ಬಂದು ಧೂಳಿನದರ್ಶನಕೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||

Elu narayana elu lakshmiramana ||pa||

Elu srigiri odeya srivenkatesa
Elayya belagayitu ||a.pa||

Kasidda halannu kavadiyolu heppittu
Lesagi kadedu hosabenne koduve
Seshasayanane elu samudra mathanava madu
Desa kempayitu elayya hariye ||1||

Aralu mallige jaji parimalada pushpagala
Suraru tandiddare balu Bakutiyinda
Aravindanaba siri vidhibavadigalodeya
Hiridagi koli kugitelayya hariye ||2||

Dasarellaru bandu dhuli darsana gondu
Lesagi tala dandigeya pididu
Srisaneleyadi kesava nimma padavanu
Lesagi smarisi pogaluvaru hariye ||3||

dasara padagalu · kanakadasaru · MADHWA

Lali pavana charana lali agaharana

ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ                 ।।ಪ॥

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ ಜಜೀಯ          ।।೧।।

ಜಗದೇಕನಾಯಕ ಜಲಜದಳನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿ ವಿನುತ
ರಘುವಂಶಕುತಿಲಕ ರಮಣೀಯಗಾತ್ರ                ।।೨।।

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ          ।।೩।।

ಪಕ್ಷಿವಾಹನ ವಿಷ್ಣುಪಾಹಿ ಪರಮೇಶ
ರಕ್ಷ ಕೌಸ್ತುಭಭೂಷ ವೈಕುಂಠವಾಸ
ಅಕ್ಷಯ ಫಲದಾಟ ಅಖಿಳ ಲೋಕೇಶ
ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ                      ।।೪।।

ನರಮೃಗಾಕಾರಿ ಹಿರಣ್ಯಕ ವೈರಿ
ಕರಿರಾಜ ರಕ್ಷಕ ಕಾರುಣ್ಯಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ                  ।।೫।।

Lali pavana charana lali agaharana
Lali venkataramana lalita kalyana ||pa||

Vanajaksha madhava vasudeva tanaya
Sanakadi munivamdya sadhujanapriya
Inakotisatateja munikalpa buja
Kanakadri nilaya vemkataraya jajiya ||1||

Jagadekanayaka jalajadalanetra
Kagaraja vahana kalyana carita
Sagaratanayarchita sanakadi vinuta
Raguvamsakutilaka ramaniyagatra ||2||

Nandagopa kumara navanita cora
Mandakini janaka mohanakara
Indudharasati vinuta visvasanchara
Nandagovinda mucukunda nutasara ||3||

Pakshivahana vishnupahi paramesa
Raksha kaustubabusha vaikunthavasa
Akshaya paladata akila lokesa
Lakshana paripurna lakshmipranesa ||4||

Naramrugakari hiranyaka vairi
Kariraja rakshaka karunyamurti
Hari adikesava guru aprameya
Sridhara seshagiri vara timmaraya ||5||

 

dasara padagalu · kanakadasaru · MADHWA

Satyavantara sangaviralu

ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಅನ್ನದಾನವಿರಲು ಭಯವು ಏತಕೆ                ।।ಪ॥

ಗುರುಹಿರಿಯರ ಅರಿಯದವನ ಅರಿವದೇತಕೆ
ಪರಹಿತಾರ್ಥಕಿಲ್ಲದವನ ಶರೀರವೇತಕೆ
ಹರಿಯ ಪೂಜೆ ಮಾಡದವನ ಜನುಮವೇತಕೆ
ಸೇರಿದವರ ಹೊರೆಯದಂಥ ದೊರೆಯು ಏತಕೆ       ।।೧।।

ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ
ಭೀತನಾಗಿ ಓಡಿಬರುವ ಬಂಟಾನೇತಕೆ
ಪ್ರೀತಿ ಇಲ್ಲದೆ ಎಡೆಯನಲಿಕ್ಕಿದ ಊಟವೇತಕೆ
ಸೋತು ಹೆಣ್ಣಿಗೆ ಹೆದರಿ ನಡೆಯದ ಸುಗುಣನೇತಕೆ  ।।೨।।

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ನುಣ ಹೆಚ್ಚು ನೋಡುವಲ್ಲಿ ಇರುವುದೇತಕೆ
ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ              ।।೩।।

ತಾನು ತನ್ನನರಿಯದಂಥ ಪ್ರೌಢನೇತಕೆ
ಸ್ನಾನ ಸಂಧ್ಯಾನವಿಲ್ಲದ ಶೀಲವೇತಕೆ
ಜ್ಞಾನವಿಲ್ಲದೆ ನುರುಕಾಲ ಬದುಕಲೇತಕೆ
ಧ್ಯಾನದೊಳಗೆ ಕೃಷ್ಣನಿಲ್ಲದ ತನುವಿದ್ದೇತಕೆ            ।।೪।।

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಭಿನ್ನವರಿತು ನಡೆಯದಂಥ ಸ್ನೇಹವೇತಕೆ
ಮುನ್ನ ಕೊಟ್ಟು ಪಡೆಯಲಿಲ್ಲ ಬಯಸಲೇತಕೆ
ಚೆನ್ನ ಆದಿಕೇಶವನಿರಲು ಬೇರೆ ದೈವವೇತಕೆ          ।।೫।।

Satyavantara sangaviralu tirthavetake
Nitya annadanaviralu Bayavu Etake ||pa||

Guruhiriyara ariyadavana arivadetake
Parahitarthakilladavana sariravetake
Hariya puje madadavana janumavetake
Seridavara horeyadantha doreyu Etake ||1||

Matu kelade maletu nadeva makkaletake
Bitanagi odibaruva bantanetake
Priti illade edeyanalikkida utavetake
Sotu hennige hedari nadeyada sugunanetake ||2||

Tanu unnada pararigikkada dhanaviddetake
Mana hinanagi balva manujanetake
Nuna heccu noduvalli iruvudetake
Tanna balagaverasi unnada bagyavetake ||3||

Tanu tannanariyadantha praudhanetake
Snana samdhyanavillada silavetake
J~janavillade nurukala badukaletake
Dhyanadolage krushnanillada tanuviddetake ||4||

Sanj~jeyaritu nadeyadiruva sati iddetake
Binnavaritu nadeyadantha snehavetake
Munna kottu padeyalilla bayasaletake
Chenna adikesavaniralu bere daivavetake ||5||

dasara padagalu · kanakadasaru

Kesavanolumeyu Aguva tanaka

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ                   ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು     ||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ                        ||೧||

ಜೀವನ ವಶದೊಳು ನಾನಾ ದ್ರವ್ಯವಿರೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ                  ।।೨।।

ಸತ್ಯಧರ್ಮಗಳ ನಿತ್ಯವೂ ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥವ ವಿಚಿತ್ರದಿ ಪೇಳೆ
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
ಮುತ್ತುಕೊಟ್ಟರೆ ಮಾತನಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
ಅರ್ತಿಯ ತೋರದೆ ಇದ್ದೀತೆ                         ।।೩।।

ನ್ಯಾಯವ ಬಿಟ್ಟನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ತಾಯಿತಂದೆಗಳ ನೋಯಿಸಿದವನಿಗೆ
ಮಾಯದ ಮರಣವು ತಪ್ಪೀತೆ
ಮಾಯಾಜಾಲವ ಕಲಿತ ಮನುಜನಿಗೆ
ಕಾಯ ಕಷ್ಟವ ಬಿಟ್ಟೀತೆ                               ।।೪।।

ಸಾಧು ಸಜ್ಜನರ ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಪರರರ್ಥವ ದೋಚುವವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದೀತೆ
ಕದ್ದು ಒಡಲ ಪೊರೆವವನ ಮನೆಯೊಳು
ಇದ್ದದ್ದು ಹೋಗದೆ ಉಳಿದೀತೆ                      ।।೫।।

ಅಂಗಜ ವಿಷಯಗಳನು ತೊರೆದಾತಗೆ
ಅಂಗನೆಯರ ಸುಖ ಸೊಗಸೀತೆ
ಸಂಗ ದುಃಖಗಳು ಹಿಂಗಿದ ಮನುಜಗೆ
ಶೃಂಗಾರದ ಬಗೆ ರುಚಿಸೀತೆ
ಇಂಗಿತವರಿತ ನಿಸ್ಸಂಗಿ ಶರೀರ ವ-
ಜ್ರಾಂಗಿಯಾಗದೆ ತಾನಿದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ
ಮಂಗಗೆ ಮುಕುತಿಯು ದೊರಕೀತೆ               ।।೬।।

ಕರುಣಾಮೃತದಾಭರಣವ ಧರಿಸಿದ
ಶರಣಗೆ ಸಿರಿಯು ತಪ್ಪೀತೆ
ಶರಣ ಪಾಶದುರವಣೆ ಹರಿದಾತಗೆ
ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ
ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ
ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ                ।।೭।।

Kesavanolumeyu Aguva tanaka hari
Dasarolirutiru he manuja ||pa||

Klesapasangala haridu vilasadi
Srisana nutigala pogaluta manadolu ||a.pa.||

Mosadi jivara gasi madida papa
Kasige hodare hodite
Srisana Bakutara dushisida Pala
Kasu kottare bittite
Basheya kottu niraseya gaida Pala
Klesava golisade iddite
Busurasarvasvava hrasa madida Pala
Esesu janumaku bittite ||1||

Jivana vasadolu nana dravyavire
Dana dharmake manasadite
Hina manujanige j~janava bodhise
Hina vishaya alid~hodite
Manini manasu nidhanaviradire
Manabimanagalu ulidite
Banuprakasana Bajaneya madada
Hinage mukutiyu dorakite ||2||

Satyadharmagala nityavu bodhise
Tottina manasige sogasite
Tatvada arthava vicitradi pele
Katteya cittake hattite
Putthali bombeya chitradi bannisi
Muttukottare matanadite
Katturi tilakavanotti paneyolide
Artiya torade iddite ||3||

Nyayava bittanyayava pelalu
Nayige narakavu tappite
Bayi kobbinali bayyuva manujage
Gayavagade bittite
Tayitandegala noyisidavanige
Mayada maranavu tappite
Mayajalava kalita manujanige
Kaya kashtava bittite ||4||

Sadhu sajjanara noyisida maya
Vadige narakavu tappite
Badhisi parararthava docuvavage
Vyadhiyu kadade bittite
Bedavenisi balu kshudrava kalitare
Modavendigu adite
Kaddu odala porevavana maneyolu
Iddaddu hogade ulidite ||5||

Angaja vishayagalanu toredatage
Anganeyara suka sogasite
Sanga duhkagalu hingida manujage
Srungarada bage rucisite
Ingitavarita nissamgi sarira va-
Jrangiyagade taniddite
Mangala mahimana amgriya kanada
Mangage mukutiyu dorakite ||6||

Karunamrutadabaranava dharisida
Saranage siriyu tappite
Sarana pasaduravane haridatage
Saranara karunavu tappite
Aritu sastravanacaripa yogyage
Guru upadesavu tappite
Vara velapuradadikesavana
Smarisuvavanige moksha tappite ||7||