ಪಾರು ಮಾಡೋ ಸತ್ಯಧೀರನೆ ನಿನ್ನಯ ಚಾರು
ಚರಣಗಳಿಗೆರಗುವೆನು ||ಪ||
ಘೋರಮಾಯದ ಸಂಸಾರದೊಳಗೆ ಈಸಲಾರೆನೊ
ವರಮತಿಗುಣಗನ ಮಣಿಯೆ ||ಅ.ಪ||
ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ
ಮತಿಹೀನರಪಹಾಸ್ಯ ಮಾಡಿದರೆ
ಸತತ ದಶಮಾಷ್ಟ ವರ್ಷಗಳ ಪರಿಯಂತ ಹರಿಸೇವೆಯಾ
ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ
ಹಿತದಿಂದ ಕೈಗೊಂಡ ದಶರಥನಂದ ರಘುರಾಯ
ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ
ಭಕುತರನು ಕರೆವುತಲಿ ಬರುತಿರುವಂತೆ ನಿನ್ನಯ
ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ ||
ವರಮಧ್ವಮತಾಭಿಮಾನಿಯೆ ನಿನ್ನಯ
ದರುಶನದಿಂದ ಪಾವನನಾದೆನೋ
ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ
ವರಸೇವಾ ಸರ್ವಜ್ಞ ಪೀಠಕೆ
ಸರಸ ಶೋಭಿಸುವಾ ಹರಿವಾಯುಗಳಲಿ
ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ
ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ
ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ ||
ಆನಂದ ಜ್ಞಾನದಾಯಕನಾಜ್ಞೆಯಿಂ ಸತ್ಯ ಜ್ಞಾನಾ-
ನಂದಗಿತ್ತಿ ಉತ್ತಮಪದವಾ
ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ
ಅನುಮಾನ ಮಾಡದೇ ಪಾಲಿಸೋ ದೇವಾ
ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ
ಬಿಡಿಸೊ ದುರ್ಭಾವನಜ ಸಂಭವಾ ಧೀರ ಶ್ರೀಹನುಮೇಶವಿಠಲ
ಸೇವಕನೋ
ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ ||
Pāru māḍō satyadhīrane ninnaya cāru caraṇagaḷigeraguvenu ||pa||
ghōramāyada sansāradoḷage īsalāreno varamatiguṇagana maṇiye ||a.Pa||
yati āśramadi sītā patiya pūjisutire matihīnarapahāsya māḍidare satata daśamāṣṭa varṣagaḷa pariyanta harisēveyā ati bhakutiyindali māḍidyō jīyā hitadinda kaigoṇḍa daśarathananda raghurāya yativarane ninnaya kṣitiyoḷage hari bhakutaranu karevutali barutiruvante ninnaya prati diganta pariharisida varakīrti āśrayadinda bande ||
varamadhvamatābhimāniye ninnaya daruśanadinda pāvananādenō dorakādo yandigellarige ī gurugaḷa varasēvā sarvajña pīṭhake sarasa śōbhisuvā harivāyugaḷali niścayada bhakutiyanu pālisuvā nirutadali kāvā paramabhaktara bhāgyanidhiyandaridu hambalisutali ninnaya caraṇakeragide tvaradi karuṇisi poreyo śaraṇara san̄jīvā ||
ānanda jñānadāyakanājñeyiṁ satya jñānā- nandagitti uttamapadavā gānalōlana jagatpālana priyanē tava sēvā anumāna māḍadē pālisō dēvā tanuvanoppisi iḍuve ninnaḍigaḷa mēle śiravā biḍiso durbhāvanaja sambhavā dhīra śrīhanumēśaviṭhala sēvakanō anucitōcitakarma kr̥ṣṇārpaṇavenuva sumanava koḍu nī ||