ರಾಗ ಕಾಂಬೋಧಿ
ಧ್ರುವತಾಳ
ಸಮರ್ಪಣೆ ಪ್ರಕಾರ ತಿಳಿವದು ಚೆನ್ನಾಗಿ
ಸಮ ಬುದ್ಧಿವುಳ್ಳ ಜನರು ಸತತದಲ್ಲಿ
ಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆ
ಕ್ರಮ ಉಂಟು ಸ್ವಲ್ಪ ಪ್ರದೇಶ ಧರಣಿ
ಶಮೆದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದ
ಸುಮನೋಹರ ಜೀವಿಗಳಿಗೆ ಪೇಳತಕ್ಕ
ಪ್ರಮೇಯ ಇದು ಕೇವಲ ಹರುಷ ರಹಸ್ಯ ಆ –
ಗಮದಲ್ಲಿ ಸಾರಿ ಪೇಳುತಿದೆ ಉತ್ತಮ
ರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆ
ರಮಣೀಯವಾದದ್ದು ಲಕ್ಷಣೋಪೇತ
ದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆ –
ತುಮ ಅನಾತುಮದೊಳು ಚಿಂತನೆ ಗೈದು
ಸಮ ವಿಷಮದಲ್ಲಿ ಗೋಳಕವ ನೆನೆದು ಮ –
ಹಿಮೆಯನ್ನು ಮರಳಿ ಮರಳಿ ಧೇನಿಸುತ್ತ
ತಮೊಗುಣದ ಕಾರ್ಯವನ್ನು ಹಿಂಗಳದು ಶುದ್ಧ ಸತ್ವ
ಮಮತೆಯಿಂದಲಿ ಹರಿಯ ಮೆಚ್ಚಿಸಬೇಕು
ಅಮರಾದಿ ಸಮುದಾಯ ಜೀವಿಗಳಿಗೆ ಲ –
ಕುಮಿವಲ್ಲಭನೆ ಮುಖ್ಯ ಮೂಲನೆಂದು
ಕಮಲ ಕರ್ನಿಕೆಯಲ್ಲಿ ಇದ್ದ ಬಿಂಬನ ಪ್ರ –
ತಿಮೆಯಲ್ಲಿ ಇಡುವ ವಿಧ ತಿಳಿದು
ಸಮನ್ವಯ ಇಲ್ಲೆ ಮಾಡಿ ಮುಕ್ತಿ ಮಾರ್ಗವ ಪೊಂದು
ಗಮನವಾಗಲಾರದು ಕಂಡಕಡಿಗೆ
ಅಮಲವಾದ ಪೂಜೆ ಹದಿನಾರು ದಿಕ್ಕಿನಿಂದ
ಕ್ರಮ ತಿಳಿದು ಆವಾಹನ ಧ್ಯಾನ ಮಾಡಿ
ಅಮಿತ ಪ್ರತಾಪ ಹರಿ ನಿಸ್ಪ್ರಹ ನಿತ್ಯತೃಪ್ತ
ಕಮಲಭವಾದಿ ಮನಕೆ ದೂರಕ್ಕೆ ದೂರ
ಅಮಿಶ್ರ ಮಿಕ್ಕಾದ ರಸ ಭೋಕ್ತ ನಾನಾ ರೂಪದಲಿ
ಭ್ರಮೆಯಿಲ್ಲವಗೆ ನಿಜಪೂರ್ಣ ಸುಖನೊ
ಕ್ಷಮ ಮಧ್ಯದಲಿ ಸ್ಥೂಲ ಮಧ್ಯಮ ಸೂಕ್ಷ್ಮವೆಂದೀ –
ಕ್ರಮದಿಂದ ಪ್ರಸಿದ್ಧ ವಾಸನ ಚಿತ್ತು
ಚಮತ್ಕಾರ ಒಂದೊಂದಕೆ ತ್ರಿವಿಧ ಬಗೆ ಉಂಟು
ಸುಮತಿ ಲೋಕಕೆ ಸುಲಭವಾಗಿಪ್ಪದು
ಸಮನಿಸಿ ತಿಳಿಯಬೇಕು ಚತುರವಿಧ ಅನ್ನ
ರಮೆ ಬೊಮ್ಮ ತಾತ್ವಿಕರು ಸಾಕ್ಷಾತ್ಪರಮನ
ನಿಮಿಷ ಬಿಡದೆ ಇನಿತು ಸೃಷ್ಟ್ಯಾದಿ ಇಷ್ಟವಾಗಿ ಅ –
ಪ್ರಮೇಯ ಪ್ರಾಜ್ಞಬಿಂಬ ಕೈಕೊಂಬೋರು
ಕಮಠ ಕಪಿಲ ಭೃಗು ನರಸಿಂಹ ನಾಮದಲಿ
ರಮಿಪ ಜಿಹ್ವೇಂದ್ರಿಯದಲಿ ಸ್ವೀಕರಿಸಿ
ಕುಮತಿ ಜನಕೆ ತಿಳಿಯಗೊಡನೊ ಅನಾದ್ಯವಿದ್ಯಾ
ತಿಮಿರ ಭಾನು ಭವಾರ್ಣವ ತಾರಕ ಉ –
ತ್ತಮವಾದ ಯೋಗ್ಯರಸ ತತ್ತತ್ಪದಾರ್ಥದಲಿ
ಸಮ ತಿಳಿಸಿಕೊಂಡರೆ ಯೋಗಮಾಯಾ
ಅಮರರಿಗೆ ಉಣಿಸುವ ತಾನು ಕೈಕೊಂಬ ದು –
ರ್ಗಮ ಕಾಣೊ ದುಃಖ ದೂರ ಮಹಾಪ್ರಭುವೊ
ಉಮೆಯರಸ ಪರಿಯಂತ ಈ ರಸ ಸಲ್ಲುವದು
ಕಮಲಭವ ಲಕುಮಿಗೆ ಇಲ್ಲವೋ
ಸುಮನಸ ಗಣಕೆ ಲೇಪನವಿಲ್ಲ ಅವರ ಆ –
ತುಮದೊಳಗಿದ್ದಖಿಳರಲ್ಲಿ ಐಕ್ಯ
ಕ್ರಮಗೆಡುವರು ಒಮ್ಮೆ ಇದರ ಪ್ರಾಚುರ್ಯದಿಂದ
ತಮತಮ್ಮ ಸ್ವಾಭಾವಿಕ ನಡತೆಯಲ್ಲಿ
ಅಮಮ ಹರಿ ಪರಮ ಶಕ್ತಿ ಸೃಷ್ಟಾ ಉಪ –
ರಮದಲ್ಲಿ ಸರ್ವರನ್ನು ಉದರದೊಳಗೆ
ತಮ ತರದಿಂದ ಪೊಂದಿಟ್ಟು ಕೊಂಡಿಪ್ಪ ಉ –
ತ್ತಮ ಶ್ಲೋಕ ಪೂರ್ಣನ್ನ ಚರಿತೆ ಎಂತೊ
ಮಮತಾ ರಹಿತಾ ಪರಾಯು ಆರಂಭಿಸಿ
ನಮಿಪಾ ಜನರು ಇತ್ತ ಭೋಗ್ಯವಸ್ತು
ಕ್ರಮದಲಿ ಆವಾವ ತತ್ವಾತ್ಮಕ ರಸಂಗಳು
ಸಮಸ್ತ ಜೀವಿಗಳಿಗೆ ಏಕ ಮಾಳ್ಪ
ಕಮಲೇಶ ಶುಭರಸ ಸವಿದುಂಬೋದು ನಿಶ್ಚಯವು
ಅಮಿತ ವಿಜ್ಞಾನಪೂರ್ಣ ಸ್ವರಮಣನು
ಕ್ರಿಮಿ ಮೊದಲಾದ ಚೇತನಕೆ ಉಪಜೀವ್ಯ ಆ –
ಕ್ರಮಕೆ ಭಗವಂತನಿಗೆ ಆಗುವದೇನೊ
ಭ್ರಮಣನಲ್ಲವೊ ಸ್ವಾಮಿ ಭಿನ್ನಾಂಶಿ ಅಂಶಕೆ ಸಂ –
ಗಮ ಮಾಡಿಸುವ ಒಂದೇ ಜೀವರನ್ನು
ನಮೊ ನಮೋ ನಮೊ ಎಂದು ಆದ್ಯಂತ ತಿಳಿದ ನರಗೆ
ಸಮವೃತ್ತಿ ಭೀತಿ ಇಲ್ಲ ಎಲ್ಲಿದ್ದರೂ
ಹಿಮಕರ ವರ್ಣ ವಿಜಯವಿಟ್ಠಲ ನನುಪಮ –
ನೆಂದರ್ಪಿಸೆ ಕೈವಲ್ಯಾ ಸರ್ವದಾ ಕೈಕೊಂಬಾ ॥ 1 ॥
ಮಟ್ಟತಾಳ
ಅರ್ಪಿಸಲಿಬೇಕು ಅಧಿಕಾರ ಭೇದದಲಿ
ಸರ್ಪಿ ಮೊದಲಾದ ನಾನಾ ವಸ್ತುಗಳಿಂದ
ದರ್ಪತನವೆ ಬಿಟ್ಟು ಧರ್ಮ ಮಾರ್ಗದಲಿ ಕಂ –
ದರ್ಪ ಪಿತನೆ ಸರ್ವ ವ್ಯಾಪ್ಯ ವ್ಯಾಪಕನೆಂದು
ದರ್ಪಣದೊಳು ಬಿಂಬ ನೋಳ್ಪ ತೆರದಂತೆ
ಸರ್ಪಭೂಷಣ ತತ್ವದಲ್ಲಿ ಇದ್ದದ್ದೆ ಗ್ರಹಿಸು
ದರ್ಪಜನರ ವೈರಿ ವಿಜಯವಿಟ್ಠಲರೇಯಾ
ಅರ್ಪಿತ ಕೈಕೊಂಬಾ ಭಕುತಿ ಮಾತ್ರಕೆ ಒಲಿದು ॥ 2 ॥
ತ್ರಿವಿಡಿತಾಳ
ಒಂದೊಂದು ಪದಾರ್ಥಕ್ಕೆ ಒಬ್ಬೊಬ್ಬ ಅಭಿಮಾನಿಗಳು
ವೃಂದಾರಕ ಜನ ಉಂಟು ಅದಕೆ
ಒಂದೊಂದು ಭಗವದ್ರೂಪಗಳಲ್ಲಿ ಇಪ್ಪವು
ಕುಂದದಲೆ ತಿಳಿದು ಕೊಂಡಾಡುವದು
ನಂದವಾಹದು ಜನಕೆ ಅನ್ನ ಪಾಯಸದಲ್ಲಿ
ಚಂದ್ರ ಭಾರತಿ ಕೇಶವ ನಾರಾಯಣ
ಸಂದೋರು ಭಕ್ಷ ಘೃತ ಕ್ಷೀರದಲ್ಲಿ ಅರ –
ವಿಂದ ಬಾಂಧವ ಲಕುಮಿ ವಾಣಿಯಲ್ಲಿ
ನಿಂದಿಹ ಮಾಧವ ಗೋವಿಂದ ವಿಷ್ಣು ಬಲು
ಅಂದ ಮಂಡಿಗೆ ಬೆಣ್ಣೆ ದಧಿ ಸೂಪಕ್ಕೆ
ಒಂದೊಂದಿರಾ ಮೌಳಿ ವಾಯು ಚಂದ್ರವರುಣಾ
ವಿಂದ್ರ ಮುಧುರಿಪು ಕ್ರಮಾತು ಶ್ರೀಧರಾ
ಮುಂದೆ ಪತ್ರ ಫಲ ಶಾಕಾ ಆಮ್ಲ ಅನಾಮ್ಲಕ್ಕೆ
ಪೊಂದಿ ಮಿತ್ರ ಶೇಷ ಗೌರಿ ಗೌರೀಶರು
ಇಂದಿರೇಶ ಪದ್ಮನಾಭ ದಾಮೋದರ ಗುಣ –
ಸಾಂದ್ರ ಸಂಕರುಷಣ ಮೂರ್ತಿ ಎನ್ನು
ಇಂದ್ರ ಯಮ ವಾಸುದೇವ ಪ್ರದ್ಯುಮ್ನ ಆ –
ನಂದ ಅನಿರುದ್ಧನು ಸಕ್ಕರೆ ಬೆಲ್ಲಾ
ಛಂದ ಉಪಸ್ಕರ ಕಟುಗಳಿಗೆ ಇವರೆನ್ನು
ವಂದಿಸುವದು ಈ ಪರಿ ತಿಳಿದೂ
ಗಂದುಗ್ರ ಯಾಲಕ್ಕಿ ಸಾಸಿವಿ ಮತ್ತೆ ಶ್ರೀ –
ಗಂಧ ಕರ್ಪೂರ ಇವಕೆಲ್ಲ ಕೇಳಿ
ಕಂದರ್ಪ ಪುರುಷೋತ್ತಮ ತೈಲ ಪಕ್ವಕೆ
ಇಂದ್ರಜ ಅಧೊಕ್ಷಜ ದೇವತೆಯೊ
ಸಂದೀದ ಕುಷ್ಮಾಂಡ ಪರಿಶುದ್ಧ ತಿಲಮಾಷ –
ದಿಂದ ನಿರ್ಮಿತಕ್ಕೆ ದಕ್ಷ ನರಸಿಂಹನೆ
ರಂಧ್ರವುಳ್ಳ ಭಕ್ಷಮಾಷ ಮಿಕ್ಕಾದದಕೆ ಸ –
ಬಂಧವಾಗಿಹ ಮನು ಅಚ್ಯುತ ದೇವಾ
ಸೈಂಧವ ಸಂದಿಜಕೆ ನಿರಋತಿ ಪ್ರಾಣ ಉ –
ಪೇಂದ್ರನು ಜನಾರ್ದನ ಯುಕ್ತ ಕ್ರಮದಲ್ಲಿ
ತಂದಿಡುವ ತಾಂಬೂಲ ಸ್ವಾದೋದಕದಲ್ಲಿ
ಮಂದಾಕಿನಿ ಸೌಮ್ಯ ಹರಿ ಕೃಷ್ಣನೋ
ಒಂದೊಂದು ಅಭಿಮಾನಿ ಒಂದೊಂದು ಮೂರ್ತಿ ಮು –
ಕುಂದನ ಪ್ರೇರಣೆ ಇಂದ ಪೇಳಿದೆ
ಮಂದರಾದ್ರಿಧರ ವಿಜಯವಿಟ್ಠಲ ಕರುಣಾ –
ದಿಂದ ಸುಳಿದಾಡುವ ಸವಿದು ತೃಪ್ತನಾಗಿ ॥ 3 ॥
ಅಟ್ಟತಾಳ
ಪುಷ್ಕರ ರತಿ ಹಂಸನಾಮಕ ಪರಮಾತ್ಮ
ವಿಶ್ವನು ಪಾವಕ ಶುದ್ಧಿಗೆ ಸ್ವಾದು ರಸಕೆನ್ನಿ
ವಸುಜೇಷ್ಟ ವಸಂತ ವಲಿಗೆ ಗೋಮಯ ಪಿಂಡ
ಕೊಸತಿಯಾಗಿಪ್ಪರು ಭಾರ್ಗವ ಋಷಭನು
ಅಸಮಾ ಗುಣದೇವಿ ಪಾಕ ಕತೃಗಳಿಗೆ
ವಿಶ್ವಂಭರ ದೇವ ಅಲ್ಲಿ ವಾಸಾ
ವಸುಧೀ ವರಾಹ ನೈವೇದ್ಯ ಮಂಡಲದಲ್ಲಿ
ಎಸೆವ ಮೇಲು ಭಾಗಕೆ ವಿಘ್ನೇಶ್ವರ ಕುಮಾರ
ಮಿಸುಣಿಪ ವರ್ಣಕೆ ಶಿಷ್ವಕ್ಸೇನ ಪು –
ರಷನಾಮಕ ಭಗವಂತನ ಚಿಂತಿಸು
ಎಸಳು ತುಳಸಿಗೆ ಶ್ರೀದೇವಿ ಕಪಿಲ ರಂ –
ಜಿಸುವ ಪಾತ್ರಿಯಲ್ಲಿ ವಾರುಣಿ ಆನಂದ
ಬೆಸಸೂವೆ ಭೋಜನ ಪಾತ್ರಿ ವ್ಯಜನಕೆ ಶೋ –
ಭಿಸುವರು ದುರ್ಗಾ ಸೌಪರ್ಣಿ ಸತ್ಯಾದತ್ತ
ಮಶಕಾದಿ ಸ್ಪರ್ಶದೋಷ ಪರಿಹಾರಕ್ಕೆ
ಶ್ವಶನ ಮುದ್ರೆ ಎನಬೇಕು ತಾರ್ಕ್ಷ್ಯಮುದ್ರೆಯು
ವಿಷ ನಿವಾರಣಾರ್ಥ ತೋರಿಸಬೇಕು ಶುಭ
ರಸ ಸಿದ್ಧಿಗೆ ಧೇನು ಮುದ್ರೆ ತೋರಿಸಬೇಕು
ಬಿಸಿಜ ಮುದ್ರೆಯು ಶೋಧನಾರ್ಥವು ಸು –
ದರ್ಶನ ಮುದ್ರೆಯು ರಕ್ಷಣಾರ್ಥ ಶಂಖ ಗದಾ ಕ –
ಲಶ ಮುದ್ರೆಗಳು ತೋರಿಸಬೇಕು ಚನ್ನಾಗಿ
ದಶ ದಿಗ್ಬಂಧನ ಅಮೃತಬಿಂದು ಪವಿತ್ರಕೆ
ಬೆಸನೆ ತಿಳಿದು ಮತ್ತೆ ಹಂಸ ಮುದ್ರೆಯು
ಪೆಸರುಗೊಳಿಸಲಿಬೇಕು ಎಲ್ಲಿ ಬೇಕಾದಲ್ಲಿ
ಕುಶಲ ಮಂತ್ರ ಜ್ಞಾನ ಪೂರ್ವಕದಿಂದ ಚಿಂ –
ತಿಸಬೇಕು ನಾನಾ ಪದಾರ್ಥದ ವೈಭವ
ಅಸು ಕರಣ ಕಾಯ ಭೇದವನರಿತು ತು –
ತಿಸಬೇಕು ಹರಿಯ ಈ ಪರಿಯಲ್ಲಿ ಸ್ವತಂತ್ರ ನಿ –
ರ್ದೋಷ ಗುಣಪೂರ್ಣ ನಿಸ್ಪೃಹ ಸಾರಭೋಕ್ತಾ ಅಪ್ರಮೇ –
ಯ ಸತ್ಯ ಸಂಕಲ್ಪ ಕರುಣಾನಿಧಿ ಭಕ್ತ
ವತ್ಸಲ ನಾರಾಯಣಾತ್ಮಕ ಅಂಶಿ
ಅಂಶಾವತಾರಾವೇಶ ದ್ರವ್ಯ ಪ್ರಾಪುರ್ತಿ
ಉಸರಿಕ್ಕದೆ ನಿನ್ನ ದಾಸನೆಂದು
ಪುಶಿಯಲ್ಲ ಪುಶಿಯಲ್ಲ ಪುಶಿಯಲ್ಲ ಎನುತಲಿ
ವಶವಾಗಿ ಇಪ್ಪ ದೇವನ ನೀಕ್ಷಿಸಿ
ಹಸುಳೆ ಎಂದದಲಿ ಪರಮೋತ್ಸಹ ವಿಡಿದು ಸಾ –
ಧಿಸು ಗುಣರೂಪ ಕ್ರೀಯಾದ ಸಮರ್ಪಣೆ
ಅಸುರ ಸಂಹಾರ ನಮ್ಮ ವಿಜಯವಿಟ್ಠಲರೇಯಾ
ವಿಷಯಂಗಳಿಗೆ ದೂರ ಅನಾದಿ ಸ್ವಭಾವಾ ॥ 4 ॥
ಆದಿತಾಳ
ರತ್ನ ಮಂತ್ರ ವಿಷ್ಣು ಸಹಸ್ರನಾಮ ತಂತ್ರಿಕ
ಚಿತ್ತ ಶುದ್ಧನಾಗಿ ಮೂರು ಪ್ರಕಾರದಲ್ಲಿ
ತತ್ವಜ್ಞಾನದಿಂದ ಅಲ್ಪಜ್ಞ ನಾನು ಎಂದು
ತುತ್ತಿಸಿ ಮಂಗಳಮೂರ್ತಿಗೆ ನೈವೇದ್ಯ
ಉತ್ತಮ ಗುಣವುಳ್ಳ ಹವಿಸ್ಸು ಪರಮ ಪಾ –
ವಿತ್ರ ಸ್ವಾದು ಸುಗಂಧ ಹವ್ಯ ಭಾವ ಕ್ರಿಯಾದಿ
ಅತ್ಯಂತ ವಿಶುದ್ಧ ಮನೋಹರ ಅಮೃತವಾಗಿಹ
ಸತ್ಯ ಭೋಗ ದ್ರವ್ಯ ಹರಿಯ ಮುಂಭಾಗದಲ್ಲಿ
ನಿತ್ಯ ಹೀಗೆ ಚಿಂತಿಸಿ ಪರಮಾನ್ನ ಹರಿದ್ರಾನ್ನ
ಚಿತ್ರಾನ್ನ ಮುದ್ಗಾನ್ನ ಅಪೂಪ ವಿಧಗಳು
ಮತ್ತೆ ಕದಳಿ ಫಲ ಸಂಬ್ರಾಣ ಸುಫಲ ಪಕ್ಷ
ತಥ್ಥಳಿಸುವ ಕಂದಮೂಲ ವ್ಯಂಜನ ನಾನಾ
ವಸ್ತು ಗೋಘೃತ ಮಿಶ್ರಾಫಲ ಮೊದಲಾದವು
ತತ್ತಸ್ಥಾನದಲಿ ಇಡಿಸಿಕೊಂಡು ಸರ್ವ
ಕರ್ತೃ ನೀನೆ ಎಂದು ಮೇರುಮುದ್ರೆ ತೋರಿಸಿ
ಭೃತ್ಯ ಇತ್ತದ್ದು ಕೈಕೊಳ್ಳಬೇಕೆಂದು ಚಿಂತಿಸು
ಪ್ರತ್ಯೇಕ ಪ್ರತ್ಯೇಕ ಧ್ಯಾನದಿಂದಲಿ ತಿಳಿದು
ತತ್ತದ್ರಸ ಸಂಯೋಗ ವಿಭಾಗ ಯೋಚಿಸು
ಸತ್ವ ರಾಜಸ ತಮೋಗುಣದಿಂದ ಷಡುರಸ ಇ –
ಪ್ಪತ್ತು ನಾಲ್ಕು ರಸ ಅದರೊಳಗಿಪ್ಪವು
ಉತ್ತಮರಸ ಎರಡು ಎಂದಿಗೆ ನಾಶವಿಲ್ಲ
ವ್ಯಾಪ್ತವಾಗಿಪ್ಪವು ಆದಿಮಧ್ಯಾಂತದಲ್ಲಿ
ಸುತ್ತುವ ಮನಸು ನಿಲ್ಲಿಸಿ ಸಾಧನದಲ್ಲಿ ಮಾನು –
ಷೋತ್ತಮ ಮಾಡಬೇಕು ಅನಪರೋಕ್ಷ ಕಾಲಕೆ
ಸತ್ಯ ಸಂಕಲ್ಪನೆಂದು ಮೌನವಿಡಿದು ಪೂರ್ವ
ಉತ್ತರಾಪೋಶನ ವಿಧಿ ಆಚಮನಾ ನೀಯೊ
ಪ್ರತ್ಯಕ್ಷವಾಗಿದ್ದ ಗ್ರಹಮೇಧಿಯಾದವ
ನಿತ್ಯ ಈ ಪರಿಯಿಂದ ಚರಿಸಬೇಕೂ ಚನ್ನಾಗಿ
ತುತ್ತು ತೊರದು ಗುಹಾ ಸೇರಿದವನಾದರು
ಹೊತ್ತು ಹೊತ್ತಿಗೆ ಕೊಂಬ ಆಹಾರ ಅರ್ಪಿಸಬೇಕೂ
ಉತ್ತಮ ಮಧ್ಯಮ ಅಧಮರ ಬಗೆ ಬೇರೆ
ಆತ್ಮ ಭಜನೆಯೊಳಗೆ ಸರ್ವವು ಇದ್ದ ತೆರದಿ
ಚಿತ್ತದಲ್ಲಿ ಸರ್ವವು ಎಣಿಸಿ ಉಣಿಸಲಿ ಬೇಕು
ಹತ್ತದು ಮನಸಿಗೆ ಒಮ್ಮಿಂದೊಮ್ಮೆಲೆ ಗು –
ಣೋತ್ಕರ್ಷಣೆ ಮಾಡಿದರೆ ಸುಲಭವಾಗಿಪ್ಪವು
ನಿತ್ಯಾನಂದ ನಮ್ಮ ವಿಜಯವಿಟ್ಠಲರೇಯಾ
ಅರ್ಥಿಯಿಂದಲಿ ಸಾಲಿಗ್ರಾಮಾದಿಯಲ್ಲಿ ಉಂಬ ॥ 5 ॥
ಜತೆ
ಸ್ವಲ್ಪ ಪೇಳಿದೆ ಇದೆ ಬಿಡದೆ ಚಿಂತಿಸು ಅಹಿ –
ತಲ್ಪ ವಿಜಯವಿಟ್ಠಲ ಗರ್ಪಿಸೆ ಕೈಕೊಂಬಾ ॥
rAga kAMbOdhi
dhruvatALa
samarpaNe prakAra tiLivadu cennAgi
sama buddhivuLLa janaru satatadalli
himaSEtu madhyadalli puTTida dESadoLage
krama uMTu svalpa pradESa dharaNi
Samedame uLLa madhvamatadalli poMdidda
sumanOhara jIvigaLige pELatakka
pramEya idu kEvala haruSha rahasya A –
gamadalli sAri pELutide uttama
rameyarasanna divya vigraha manasige
ramaNIyavAdaddu lakShaNOpEta
dyumaNi prakASadaMte opputippadu A –
tuma anAtumadoLu ciMtane gaidu
sama viShamadalli gOLakava nenedu ma –
himeyannu maraLi maraLi dhEnisutta
tamoguNada kAryavannu hiMgaLadu Suddha satva
mamateyiMdali hariya meccisabEku
amarAdi samudAya jIvigaLige la –
kumivallaBane muKya mUlaneMdu
kamala karnikeyalli idda biMbana pra –
timeyalli iDuva vidha tiLidu
samanvaya ille mADi mukti mArgava poMdu
gamanavAgalAradu kaMDakaDige
amalavAda pUje hadinAru dikkiniMda
krama tiLidu AvAhana dhyAna mADi
amita pratApa hari nispraha nityatRupta
kamalaBavAdi manake dUrakke dUra
amiSra mikkAda rasa BOkta nAnA rUpadali
Brameyillavage nijapUrNa suKano
kShama madhyadali sthUla madhyama sUkShmaveMdI –
kramadiMda prasiddha vAsana cittu
camatkAra oMdoMdake trividha bage uMTu
sumati lOkake sulaBavAgippadu
samanisi tiLiyabEku caturavidha anna
rame bomma tAtvikaru sAkShAtparamana
nimiSha biDade initu sRuShTyAdi iShTavAgi a –
pramEya prAj~jabiMba kaikoMbOru
kamaTha kapila BRugu narasiMha nAmadali
ramipa jihvEMdriyadali svIkarisi
kumati janake tiLiyagoDano anAdyavidyA
timira BAnu BavArNava tAraka u –
ttamavAda yOgyarasa tattatpadArthadali
sama tiLisikoMDare yOgamAyA
amararige uNisuva tAnu kaikoMba du –
rgama kANo duHKa dUra mahApraBuvo
umeyarasa pariyaMta I rasa salluvadu
kamalaBava lakumige illavO
sumanasa gaNake lEpanavilla avara A –
tumadoLagiddaKiLaralli aikya
kramageDuvaru omme idara prAcuryadiMda
tamatamma svABAvika naDateyalli
amama hari parama Sakti sRuShTA upa –
ramadalli sarvarannu udaradoLage
tama taradiMda poMdiTTu koMDippa u –
ttama SlOka pUrNanna carite eMto
mamatA rahitA parAyu AraMBisi
namipA janaru itta BOgyavastu
kramadali AvAva tatvAtmaka rasaMgaLu
samasta jIvigaLige Eka mALpa
kamalESa SuBarasa saviduMbOdu niScayavu
amita vij~jAnapUrNa svaramaNanu
krimi modalAda cEtanake upajIvya A –
kramake BagavaMtanige AguvadEno
BramaNanallavo svAmi BinnAMSi aMSake saM –
gama mADisuva oMdE jIvarannu
namo namO namo eMdu AdyaMta tiLida narage
samavRutti BIti illa elliddarU
himakara varNa vijayaviTThala nanupama –
neMdarpise kaivalyA sarvadA kaikoMbA || 1 ||
maTTatALa
arpisalibEku adhikAra BEdadali
sarpi modalAda nAnA vastugaLiMda
darpatanave biTTu dharma mArgadali kaM –
darpa pitane sarva vyApya vyApakaneMdu
darpaNadoLu biMba nOLpa teradaMte
sarpaBUShaNa tatvadalli iddadde grahisu
darpajanara vairi vijayaviTThalarEyA
arpita kaikoMbA Bakuti mAtrake olidu || 2 ||
triviDitALa
oMdoMdu padArthakke obbobba aBimAnigaLu
vRuMdAraka jana uMTu adake
oMdoMdu BagavadrUpagaLalli ippavu
kuMdadale tiLidu koMDADuvadu
naMdavAhadu janake anna pAyasadalli
caMdra BArati kESava nArAyaNa
saMdOru BakSha GRuta kShIradalli ara –
viMda bAMdhava lakumi vANiyalli
niMdiha mAdhava gOviMda viShNu balu
aMda maMDige beNNe dadhi sUpakke
oMdoMdirA mauLi vAyu caMdravaruNA
viMdra mudhuripu kramAtu SrIdharA
muMde patra Pala SAkA Amla anAmlakke
poMdi mitra SESha gauri gaurISaru
iMdirESa padmanABa dAmOdara guNa –
sAMdra saMkaruShaNa mUrti ennu
iMdra yama vAsudEva pradyumna A –
naMda aniruddhanu sakkare bellA
CaMda upaskara kaTugaLige ivarennu
vaMdisuvadu I pari tiLidU
gaMdugra yAlakki sAsivi matte SrI –
gaMdha karpUra ivakella kELi
kaMdarpa puruShOttama taila pakvake
iMdraja adhokShaja dEvateyo
saMdIda kuShmAMDa pariSuddha tilamASha –
diMda nirmitakke dakSha narasiMhane
raMdhravuLLa BakShamASha mikkAdadake sa –
baMdhavAgiha manu acyuta dEvA
saiMdhava saMdijake nira^^Ruti prANa u –
pEMdranu janArdana yukta kramadalli
taMdiDuva tAMbUla svAdOdakadalli
maMdAkini saumya hari kRuShNanO
oMdoMdu aBimAni oMdoMdu mUrti mu –
kuMdana prEraNe iMda pELide
maMdarAdridhara vijayaviTThala karuNA –
diMda suLidADuva savidu tRuptanAgi || 3 ||
aTTatALa
puShkara rati haMsanAmaka paramAtma
viSvanu pAvaka Suddhige svAdu rasakenni
vasujEShTa vasaMta valige gOmaya piMDa
kosatiyAgipparu BArgava RuShaBanu
asamA guNadEvi pAka katRugaLige
viSvaMBara dEva alli vAsA
vasudhI varAha naivEdya maMDaladalli
eseva mElu BAgake viGnESvara kumAra
misuNipa varNake SiShvaksEna pu –
raShanAmaka BagavaMtana ciMtisu
esaLu tuLasige SrIdEvi kapila raM –
jisuva pAtriyalli vAruNi AnaMda
besasUve BOjana pAtri vyajanake SO –
Bisuvaru durgA sauparNi satyAdatta
maSakAdi sparSadOSha parihArakke
SvaSana mudre enabEku tArkShyamudreyu
viSha nivAraNArtha tOrisabEku SuBa
rasa siddhige dhEnu mudre tOrisabEku
bisija mudreyu SOdhanArthavu su –
darSana mudreyu rakShaNArtha SaMKa gadA ka –
laSa mudregaLu tOrisabEku cannAgi
daSa digbaMdhana amRutabiMdu pavitrake
besane tiLidu matte haMsa mudreyu
pesarugoLisalibEku elli bEkAdalli
kuSala maMtra j~jAna pUrvakadiMda ciM –
tisabEku nAnA padArthada vaiBava
asu karaNa kAya BEdavanaritu tu –
tisabEku hariya I pariyalli svataMtra ni –
rdOSha guNapUrNa nispRuha sAraBOktA apramE –
ya satya saMkalpa karuNAnidhi Bakta
vatsala nArAyaNAtmaka aMSi
aMSAvatArAvESa dravya prApurti
usarikkade ninna dAsaneMdu
puSiyalla puSiyalla puSiyalla enutali
vaSavAgi ippa dEvana nIkShisi
hasuLe eMdadali paramOtsaha viDidu sA –
dhisu guNarUpa krIyAda samarpaNe
asura saMhAra namma vijayaviTThalarEyA
viShayaMgaLige dUra anAdi svaBAvA || 4 ||
AditALa
ratna maMtra viShNu sahasranAma taMtrika
citta SuddhanAgi mUru prakAradalli
tatvaj~jAnadiMda alpaj~ja nAnu eMdu
tuttisi maMgaLamUrtige naivEdya
uttama guNavuLLa havissu parama pA –
vitra svAdu sugaMdha havya BAva kriyAdi
atyaMta viSuddha manOhara amRutavAgiha
satya BOga dravya hariya muMBAgadalli
nitya hIge ciMtisi paramAnna haridrAnna
citrAnna mudgAnna apUpa vidhagaLu
matte kadaLi Pala saMbrANa suPala pakSha
taththaLisuva kaMdamUla vyaMjana nAnA
vastu gOGRuta miSrAPala modalAdavu
tattasthAnadali iDisikoMDu sarva
kartRu nIne eMdu mErumudre tOrisi
BRutya ittaddu kaikoLLabEkeMdu ciMtisu
pratyEka pratyEka dhyAnadiMdali tiLidu
tattadrasa saMyOga viBAga yOcisu
satva rAjasa tamOguNadiMda ShaDurasa i –
ppattu nAlku rasa adaroLagippavu
uttamarasa eraDu eMdige nASavilla
vyAptavAgippavu AdimadhyAMtadalli
suttuva manasu nillisi sAdhanadalli mAnu –
ShOttama mADabEku anaparOkSha kAlake
satya saMkalpaneMdu maunaviDidu pUrva
uttarApOSana vidhi AcamanA nIyo
pratyakShavAgidda grahamEdhiyAdava
nitya I pariyiMda carisabEkU cannAgi
tuttu toradu guhA sEridavanAdaru
hottu hottige koMba AhAra arpisabEkU
uttama madhyama adhamara bage bEre
Atma BajaneyoLage sarvavu idda teradi
cittadalli sarvavu eNisi uNisali bEku
hattadu manasige ommiMdommele gu –
NOtkarShaNe mADidare sulaBavAgippavu
nityAnaMda namma vijayaviTThalarEyA
arthiyiMdali sAligrAmAdiyalli uMba || 5 ||
jate
svalpa pELide ide biDade ciMtisu ahi –
talpa vijayaviTThala garpise kaikoMbA ||